Thursday, 22nd August 2019

ವಿಂಗ್ ಕಮಾಂಡರ್ ಅಭಿನಂದನ್‍ಗೆ ನಾಳೆ ವೀರ ಚಕ್ರ ಪ್ರದಾನ

ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್ ಅವರು ನಾಳೆ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ‘ವೀರ್ ಚಕ್ರ’ ಪದಕವನ್ನು ಸ್ವೀಕರಿಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಪಾಕಿಸ್ತಾನ ಎಫ್-16 ಯುದ್ಧ ವಿಮಾನವನ್ನು ತನ್ನ ಮಿಗ್-21 ಯುದ್ಧ ವಿಮಾನದ ಮೂಲಕ ಹೊಡೆದುರುಳಿಸಿದ ನಂತರ ಅಭಿನಂದನ್ ಅವರು ನ್ಯಾಷನಲ್ ಹೀರೋ ಆಗಿ ಹೊರಹೊಮ್ಮಿದ್ದರು.

ಬಾಲಾಕೋಟ್ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ತನ್ನ ಎಫ್-16 ಯುದ್ಧ ವಿಮಾನದ ಮೂಲಕ ಭಾರತವನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿದ ಸಂದರ್ಭದಲ್ಲಿ ಅಭಿನಂದನ್ ವರ್ಧಮಾನ್ ತಮ್ಮ ಮಿಗ್-21 ವಿಮಾನದ ಮೂಲಕ ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅಭಿನಂದನ್ ಅವರ ಮಿಗ್-21 ವಿಮಾನ ಪಾಕಿಸ್ತಾನದಲ್ಲಿ ಪತನಗೊಂಡಿತ್ತು. ಆಗ ಸುಮಾರು 58 ಗಂಟೆಗಳ ಕಾಲ ಅಭಿನಂದನ್ ಪಾಕಿಸ್ತಾನದ ಕಸ್ಟಡಿಯಲ್ಲೇ ಇದ್ದರು. ನಂತರ ಕೇಂದ್ರ ಸರ್ಕಾರ ಪಾಕ್ ಮೇಲೆ ಒತ್ತಡ ಹೇರಿ ಅಭಿನಂದನ್ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿತ್ತು.

ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಎಫ್ 16 ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಡಿ ಬ್ರೀಫಿಂಗ್ ಪ್ರಕ್ರಿಯೆ ನಡೆಸಿದ ಸಂದರ್ಭದಲ್ಲಿ ರಜೆ ಮೇಲೆ ಮನೆಗೆ ತೆರಳುವಂತೆ ಸೇನೆಯ ಸಂಶೋಧನೆ ಹಾಗೂ ರೆಫರೆಲ್ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದರು.

ಡಿ ಬ್ರೀಫಿಂಗ್ ವೇಳೆ ಅಭಿನಂದನ್ ಅವರು ಪಾಕ್ ಸೆರೆಯಲ್ಲಿದ್ದ ಸಂದರ್ಭದಲ್ಲಿ ನಡೆದ ಅನುಭವಗಳ ಬಗ್ಗೆ ವಿವರಿಸಿದ್ದರು. ಅದರಲ್ಲೂ ಪಾಕಿಸ್ತಾನಿ ಸೇನೆ ನೀಡಿದ ಮಾನಸಿಕ ಹಿಂಸೆಯ ಬಗ್ಗೆ ಮಾಹಿತಿ ನೀಡಿದ್ದರು.

ಫೆ.14 ರಂದು ಪುಲ್ವಾಮಾದಲ್ಲಿ ನಡೆದ ದಾಳಿಯನ್ನು ಜೈಷ್-ಎ-ಮೊಹಮ್ಮದ್ ಸಂಘಟನೆ ಹೊಣೆ ಹೊತ್ತುಕೊಂಡ ಬಳಿಕ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪರಿಣಾಮ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಭಾರತ ನೆಲವನ್ನು ಪ್ರವೇಶಿಸಿದ್ದ ಪಾಕ್ ಯುದ್ಧ ವಿಮಾನಗಳು ದಾಳಿ ನಡೆಸಲು ವಿಫಲವಾಗಿ ಹಿಂದಿರುಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಎಫ್-16 ವಿಮಾನವನ್ನು ಚೇಸ್ ಮಾಡುತ್ತಿದ್ದಾಗ ಮಿಗ್ ವಿಮಾನ ಪತನಗೊಂಡು ಅಭಿನಂದನ್ ಪ್ಯಾರಾಚೂಟ್ ಸಹಾಯದಿಂದ ಧುಮುಕಿದ್ದರು.

ಪಾಕ್ ಅಕ್ರಮಿತ ಪ್ರದೇಶದಲ್ಲಿ ಬಿದ್ದ ವೇಳೆ ಅಭಿನಂದನ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿದ್ದರು. ಅದಕ್ಕೂ ಮುನ್ನವೇ ಸೇನೆಗೆ ಸಂಬಂಧಿಸಿದ್ದ ಮುಖ್ಯ ದಾಖಲೆಗಳು ಪಾಕಿಸ್ತಾನದ ಸೇನೆಗೆ ಸಿಗದಂತೆ ಮಾಡಿ ನಾಶ ಪಡಿಸಿದ್ದರು. ಅಲ್ಲದೇ ಕೆಲ ದಾಖಲೆಗಳನ್ನು ತಾವೇ ನುಂಗಿಹಾಕಿದ್ದರು. ಪಾಕಿಸ್ತಾನದಿಂದ ವಾಪಸ್ ಆದ ಬಳಿಕ ಮಾರ್ಚ್ 2 ರಂದು ಅಭಿನಂದನ್ ಅವರನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಆಗಿದ್ದರು. ಆ ಬಳಿಕ ದೆಹಲಿಯ ಸೇನೆಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು.

Leave a Reply

Your email address will not be published. Required fields are marked *