Bengaluru City

ಶಾಲೆ, ಕಾಲೇಜು ಆರಂಭಿಸದಿದ್ದಲ್ಲಿ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದರು: ಸುರೇಶ್ ಕುಮಾರ್

Published

on

Share this

– ಹೆಣ್ಣು ಮಕ್ಕಳ ಬಾಲ್ಯವಿವಾಹ ಹೆಚ್ಚುತ್ತಿತ್ತು

ಬೆಂಗಳೂರು: ಕೊರೊನಾದಿಂದಾಗಿ ಕೆಲವು ತಿಂಗಳಿಂದ ಸ್ಥಗಿತವಾಗಿದ್ದ ಶೈಕ್ಷಣಿಕ ಚಟುವಟಿಕೆಗಳು ಪುನರಾರಂಭಗೊಂಡಿದ್ದು, ಇದು ಶಿಕ್ಷಣ ವಲಯದಲ್ಲಿ ಭರವಸೆ ಮೂಡಿಸಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಹಾಗೂ ಕರ್ನಾಟಕ ಪತ್ರಕರ್ತೆಯರ ಸಂಘ ಆಯೋಜಿಸಿದ್ದ `ಕೋವಿಡ್ ವಿಭಿನ್ನ ಆಯಾಮಗಳು’ ವೆಬಿನಾರ್ ಸರಣಿ ಸಂವಾದದಲ್ಲಿ ಮಾತನಾಡಿದ ಅವರು, ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ನೀಡಿದ ವರದಿ ಆಧರಿಸಿ ಮುಖ್ಯಮಂತ್ರಿ ಹಾಗೂ ತಜ್ಞರೊಂದಿಗೆ ಸಮಾಲೋಚನೆ ನಡೆಸಿಯೇ ಶಾಲಾ-ಕಾಲೇಜು ಪ್ರಾರಂಭಕ್ಕೆ ಅನುಮತಿ ಕೊಡಲಾಗಿದೆ. ಸಂಕಷ್ಟದ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತ ಶಾಲೆಗಳನ್ನು ಯಶಸ್ವಿಯಾಗಿ ನಡೆಸುವುದು ಸರ್ಕಾರದ ಮುಂದಿರುವ ಬಹದೊಡ್ಡ ಸವಾಲು ಎಂದರು.

ಕೊರೊನಾ ಸಂಕಷ್ಟದ ಸಮಯದಲ್ಲಿ ಶಾಲಾ-ಕಾಲೇಜು ಪ್ರಾರಂಭಿಸುವುದು ಸರ್ಕಾರದ ಎದುರಿದ್ದ ದೊಡ್ಡ ಸವಾಲು. ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ದಿನೇ ದಿನೇ ತರಗತಿಗೆ ಮಕ್ಕಳ ಹಾಜರಾತಿ ಸಮಾಧಾನ ತಂದಿದ್ದು, ಶೈಕ್ಷಣಿಕ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ ಎಂದರು.

ಕೊರೊನಾ ಭಯದಿಂದ ಕೆಲ ತಿಂಗಳಿಂದ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಈ ವೇಳೆ ಗ್ರಾಮೀಣ ಭಾಗಗಳಲ್ಲಿ ಮಕ್ಕಳ ಕೈಯಲ್ಲಿ ದುಡಿಸಿಕೊಳ್ಳಲಾಗಿದೆ. ಹೆಣ್ಣುಮಕ್ಕಳನ್ನು ಬಾಲ್ಯವಿವಾಹಕ್ಕೆ ಗುರಿಮಾಡಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದಿದ್ದೇ ಆದಲ್ಲಿ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವುದು ಕಷ್ಟದ ಕೆಲಸ. ಮಕ್ಕಳನ್ನು ಮತ್ತೆ ಶಿಕ್ಷಣ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಪೋಷಕರಿಗೂ ಕೂಡ ಬಹುದೊಡ್ಡ ಸವಾಲು. ಈ ಎಲ್ಲ ಸಮಸ್ಯೆಗಳನ್ನು ಪರಾಮರ್ಶಿಸಿಯೇ ಸರ್ಕಾರ ಆರೋಗ್ಯ ಇಲಾಖೆಯ ಸಲಹಾ ಸಮಿತಿ ತಜ್ಞರೊಡನೆ ದೀರ್ಘ ಸಮಾಲೋಚನೆ ನಡೆಸಿ ಶಾಲಾ-ಕಾಲೇಜು ಪ್ರಾರಂಭಿಸಿದೆ. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ 6-9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಕಾರ್ಯಕ್ರಮದಡಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.

ಕೊರೊನಾ ಸಂದರ್ಭದಲ್ಲಿ ಹತ್ತನೇ ತರಗತಿಯ ಪರೀಕ್ಷೆಗಳನ್ನು ನಡೆಸುವುದೇ ಕಷ್ಟವಾಗಿತ್ತು. ಕೊರೊನಾ ಸೋಂಕು ತೀವ್ರವಾಗಿದ್ದ ದಿನಗಳಲ್ಲಿ ಮಕ್ಕಳಿಗೆ ಅನ್ಯಾಯವಾಗಬಾರದು, ಕಲಿತ ಮಕ್ಕಳಿಗೆ ವಂಚನೆಯಾಗಬಾರದೆಂದು ಮುನ್ನೆಚ್ಚರಿಕೆ ವಹಿಸಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದವು. ಮಕ್ಕಳು ಧೈರ್ಯದಿಂದ ಪರೀಕ್ಷೆ ಬರೆದರು. ಒಂದೆಡೆ ಭಯ, ಆತಂಕದ ಸನ್ನಿವೇಶದಲ್ಲಿ ವಿವಿಧ ಇಲಾಖೆಗಳು, ಪೋಷಕರು, ವಿದ್ಯಾರ್ಥಿಗಳು ತುಂಬಾ ಸಹಕಾರ ನೀಡಿದರು ಎಂದು ಸ್ಮರಿಸಿದರು.

ವಿದ್ಯಾರ್ಥಿಗಳ ಧೈರ್ಯದ ಬಗ್ಗೆ ಸುಪ್ರೀಂಕೋರ್ಟ್ ಸಹ ಮೆಚ್ಚುಗೆ ವ್ಯಕ್ತಪಡಿಸಿತು. ನಂತರ ಸ್ಪರ್ಧಾತ್ಮಕ ಪರೀಕ್ಷೆಗಳು ಕೂಡ ನಡೆದವು. ಈ ಸವಾಲು ಹೊಸ ವಿಷಯಗಳ ಕಲಿಕೆಗೆ ಅವಕಾಶ ನೀಡಿತು. ವಿದ್ಯಾಗಮ ಒಳಗೊಂಡಂತೆ ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರಲು ಅನುವು ಮಾಡಿಕೊಟ್ಟಿದೆ ಎಂದರು.

ಮುನ್ನೆಚ್ಚರಿಕೆಯ ಕ್ರಮದೊಂದಿಗೆ ಶಾಲೆಗಳನ್ನು ಪ್ರಾರಂಭಿಸಲಾಗಿದೆ, ಎಸ್‍ಎಸ್‍ಎಲ್‍ಸಿ ಹಾಗೂ ದ್ವೀತಿಯ ಪಿಯುಸಿಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಕಲಿಕೆ ಮಕ್ಕಳಿಗೆ ಆಗಲೇಬೇಕಿರುವುದರಿಂದ ಪಠ್ಯಕ್ರಮದಲ್ಲಿ ಯಾವುದೇ ಕಡಿತ ಇರುವುದಿಲ್ಲ. ಈ ವರ್ಷದಲ್ಲಿ ಮಕ್ಕಳಿಗೆ ಮನೋಬಲ ತುಂಬಬೇಕಾದ ನಿಟ್ಟಿನಲ್ಲಿ ಪಠ್ಯ ಕಡಿತ ಮಾಡುವ ವಿಚಾರ ಸರ್ಕಾರದ ಮುಂದಿಲ್ಲ. ನಿಗದಿತ ಅವಧಿಯಲ್ಲಿ ತರಗತಿಯ ವಿಷಯಗಳನ್ನು ಸಂಪೂರ್ಣವಾಗಿ ಕಲಿಸಿಕೊಡುವ ನಿಟ್ಟಿನಲ್ಲಿ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿಯನ್ನು ತಯಾರಿಸುವ ಕುರಿತು ಹಾಗೂ ಅದರ ಸಾಧಕ-ಬಾಧಕಗಳನ್ನು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ವಸತಿನಿಲಯದ ಸೌಲಭ್ಯ ಹೊಂದಿರುವ ಶಾಲೆಗಳಲ್ಲೂ ವಿದ್ಯಾರ್ಥಿಗಳ ಆರೋಗ್ಯದ ಹಿತರಕ್ಷಣೆಗೆ ಆದ್ಯತೆ ನೀಡಲಾಗುವುದು. ಈ ಕುರಿತಂತೆ ಪಾಲಿಸಬೇಕಾದ ಎಚ್ಚರಿಕೆಯ ಕ್ರಮಗಳ ಕುರಿತು ವಸತಿಶಾಲೆಗಳ ಮುಖ್ಯಸ್ಥರಿಗೆ ಮಾರ್ಗಸೂಚಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪೋಷಕರು ಅಷ್ಟೇ ಅಲ್ಲ ಮಕ್ಕಳು ಕೂಡ ಒತ್ತಡದಲ್ಲಿದ್ದಾರೆ. ಮಕ್ಕಳಿಗೂ ಕೌನ್ಸೆಲಿಂಗ್ ಅಗತ್ಯವಿದೆ. ಸದ್ಯಕ್ಕೆ ತರಗತಿಗಳು ಪ್ರಾರಂಭವಾಗಿವೆ. ಶಾಲೆಯಲ್ಲಿ ದೈಹಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಕುರಿತು ಸದ್ಯದಲ್ಲೇ ನಿರ್ಧರಿಸಲಾಗುವುದು. ಕೊರೊನಾದ ಎರಡನೇ ಅಲೆಯ ಭೀತಿಯ ನಡುವೆಯೂ ಜೀವ ಹಾಗೂ ಜೀವನ ಎರಡನ್ನೂ ಸಮತೋಲನವಾಗಿ ಮುನ್ನಡೆಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರದಾಗಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುತ್ತ ಕೋವಿಡ್‍ನ ನಿಯಂತ್ರಣಕ್ಕೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ ಎಂದರು.

ಯೂರೋಪ್ ದೇಶಗಳಲ್ಲಿ ಕೊರೊನಾ ಎರಡನೇ ಅಲೆ ಗಂಭೀರ ಪರಿಣಾಮಗಳನ್ನೇ ಬೀರಿದೆ. ಭಾರತದಲ್ಲೂ ಎರಡನೇ ಅಲೆ ಪ್ರಾರಂಭವಾಗುವ ಲಕ್ಷಣಗಳು ಕಂಡುಬಂದಿದ್ದು, ಜನವರಿ ಮೂರನೇ ವಾರ ಇಲ್ಲವೇ ಫೆಬ್ರವರಿ ಮೊದಲ ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಸಂಶೋಧನಾ ಅಧಿಕಾರಿ ಡಾ.ಮೊಹಮ್ಮದ್ ಷರೀಫ್ ಎಚ್ಚರಿಕೆ ನೀಡಿದರು.

ರೂಪಾಂತರ ವೈರಾಣು ಮಿಥ್ಯ ಮತ್ತು ವಾಸ್ತವಗಳು-ಸಂಕ್ರಾಂತಿ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾತನಾಡಿದ ಅವರು, ಬ್ರಿಟನ್‍ನ ರೂಪಾಂತರ ವೈರಾಣುಗಳಿಂದ ಹೆಚ್ಚಿನ ಅಪಾಯ ಇಲ್ಲ. ಆದರೂ ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ. ಯೂರೋಪ್ ದೇಶಗಳಲ್ಲಿ ಕೊರೊನಾದ ಎರಡನೇ ಅಲೆ ಪ್ರಾರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ದೇಶಗಳಲ್ಲಿ ಮತ್ತೆ ಲಾಕ್‍ಡೌನ್ ಜಾರಿಯಾಗಿದೆ. ಕರ್ನಾಟಕದಲ್ಲೂ ಕೂಡ ಜನವರಿ ಕೊನೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ಅಲೆಯ ಪರಿಣಾಮದ ಬಗ್ಗೆ ಮಾಹಿತಿ ಲಭಿಸಲಿದೆ. ಬ್ರಿಟನ್‍ನಿಂದ ಕರ್ನಾಟಕಕ್ಕೆ ಬಂದ 112 ಮಂದಿಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಪೈಕಿ ಬೆಂಗಳೂರಿನಲ್ಲಿ 9, ಬಳ್ಳಾರಿಯಲ್ಲಿ 1 ಹಾಗೂ ಶಿವಮೊಗ್ಗದಲ್ಲಿ 2 ಸೋಂಕಿನ ಲಕ್ಷಣಗಳಿರುವ ಕುರಿತು ವರದಿ ಬಂದಿದ್ದು, ಪತ್ತೆ ಹಚ್ಚುವ ಕೆಲಸ ನಡೆದಿದೆ ಎಂದರು.

ಸಂಕ್ರಾಂತಿ ಸುಗ್ಗಿ ಹಬ್ಬವಾಗಿದ್ದು, ಗ್ರಾಮೀಣ ಭಾಗದಲ್ಲಿ ಹಬ್ಬ ಕಳೆಗಟ್ಟಲಿದೆ. ಹಬ್ಬದಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಜ್ಞರ ಸಮಿತಿ ಸರ್ಕಾರದೊಡನೆ ಸಮಾಲೋಚನೆ ನಡೆಸಿ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದರು. ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಪಿಐಬಿಯ ಅಧಿಕಾರಿ ಜಯಂತಿ ಸೇರಿದಂತೆ ಹಿರಿಯ ಪತ್ರಕರ್ತರು ವೆಬಿನಾರ್ ನಲ್ಲಿ ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement