Connect with us

International

ಕರಾಚಿ ವಿಮಾನ ದುರಂತಕ್ಕೆ 97 ಮಂದಿ ಬಲಿ

Published

on

ಇಸ್ಲಾಮಾಬಾದ್: ಪಾಕಿಸ್ತಾನಾದ ಕರಾಚಿ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ 97 ಮಂದಿ ಮೃತಪಟ್ಟಿದ್ದು, ಇಬ್ಬರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಲ್ಯಾಂಡ್ ಆಗುವ ಒಂದು ನಿಮಿಷ ಮೊದಲೇ ವಿಮಾನ ಪತನ

ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ)ನ ಪ್ರಯಾಣಿಕರ ವಿಮಾನವು ಶುಕ್ರವಾರ ಲಾಹೋರ್‌ನಿಂದ ಕರಾಚಿಗೆ ಪ್ರಯಾಣಿಸುತ್ತಿತ್ತು. ಆದರೆ ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವ ಒಂದು ನಿಮಿಷ ಮೊದಲೇ ವಿಮಾನ ದುರ್ಘಟನೆ ನಡೆದಿತ್ತು. ವಿಮಾನವು ಕರಾಚಿಯ ಮಾಡೆಲ್ ಕಾಲೋನಿಯ ಜಿನ್ನಾ ಗಾರ್ಡನ್ ಪ್ರದೇಶದಲ್ಲಿ ಬಿದ್ದಿದೆ. ಇದರಿಂದ ಸುಮಾರು 25ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.

ವಿಮಾನ ದುರಂತದಲ್ಲಿ 97 ಜನರು ಮೃತಪಟ್ಟಿದ್ದಾರೆ. ಇಬ್ಬರು ಅಪಘಾತದಿಂದ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ಪಾಕಿಸ್ತಾನದ ಸಿಂಧ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ವಿಮಾನದಲ್ಲಿ 91 ಮಂದಿ ಪ್ರಯಾಣಿಕರಿದ್ದರು. ಜೊತೆಗೆ ಎಂಟು ಮಂದಿ ಸಿಬ್ಬಂದಿಯಿದ್ದರು. ವಿಮಾನದಲ್ಲಿ 51 ಪುರುಷರು, 31 ಮಹಿಳೆಯರು, 9 ಮಕ್ಕಳು ಸೇರಿ 91 ಪ್ರಯಾಣಿಕರು ಇದ್ದರು ಎಂದು ಸಿಂಧ್ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದರು.

ಶುಕ್ರವಾರ ಮಧ್ಯಾಹ್ನ ವಿಮಾನ ದುರಂತ ಸಂಭವಿಸಿದ್ದು, ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಚರಣೆ ಮುಂದುವರಿದಿದ್ದು, ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ. ಮೃತರಲ್ಲಿ 19 ಮಂದಿಯನ್ನು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.

ವಿಮಾನ ದುರಂತ:
ವಿಮಾನವು ಕರಾಚಿಯ ಮಾಡೆಲ್ ಕಾಲೋನಿಯ ಜಿನ್ನಾ ಗಾರ್ಡನ್ ಪ್ರದೇಶದಲ್ಲಿ ಬಿದ್ದಿದೆ. ಪರಿಣಾಮ ಅಲ್ಲಿನ ಅನೇಕ ಮನೆಗಳಿಗೆ ಬೆಂಕಿ ಹೊತ್ತಿ ಉರಿದಿದೆ. ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಪೈಲಟ್ ಎಂಜಿನ್ ವೈಫಲ್ಯದ ಬಗ್ಗೆ ವಾಯು ಸಂಚಾರ ನಿಯಂತ್ರಕಕ್ಕೆ ಮಾಹಿತಿ ನೀಡಿದ್ದರು. ಆದರೆ ವಿಮಾನ ಇನ್ನೇನು ಲ್ಯಾಂಡ್ ಆಗುವ ಹಂತದಲ್ಲಿ ಇದ್ದಾಗಲೇ ಸಂಪರ್ಕ ಕಳೆದುಕೊಂಡಿತ್ತು.

ಅಪಘಾತಕ್ಕೀಡಾದ ವಿಮಾನ ಏರ್‌ಬಸ್-320, 15 ವರ್ಷ ಹಳೆಯದಾಗಿತ್ತು. ಪೈಲಟ್‍ನ ಹೆಸರು ಸಜ್ಜಾದ್ ಗುಲ್ ಎಂದು ವರದಿಯಾಗಿದೆ. ವಿಮಾನವನ್ನು ವಸತಿ ಪ್ರದೇಶವನ್ನು ದಾಟಿಸಲು ಪೈಲಟ್ ಪ್ರಯತ್ನಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು.