Monday, 17th February 2020

ಗಂಡನ ಜೊತೆ ಮಾತಾಡ್ತಿದ್ದಾಗಲೇ 22ರ ಪತ್ನಿ ಸಾವು

ಚೆನ್ನೈ: ಮಹಿಳೆಯೊಬ್ಬಳು ತನ್ನ ಪತಿಯ ಜೊತೆ ಫೋನಿನಲ್ಲಿ ಮಾತಾಡುತ್ತಿದ್ದಾಗಲೇ ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಘಟನೆ ತಮಿಳುನಾಡಿನ ಪುದುಚೇರಿಯ ಪೆರಂಬೂರಿನಲ್ಲಿ ನಡೆದಿದೆ.

ಸೆಲ್ವಿ (22) ಮೃತ ಮಹಿಳೆ. ಈ ಘಟನೆ ಡಿಸೆಂಬರ್ 17 ರಂದು ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಸೆಲ್ವಿ ಮೃತಪಟ್ಟಿದ್ದಾಳೆ. ಮಹಿಳೆ ಕಟ್ಟಡದಿಂದ ಬೀಳುವ ದೃಶ್ಯ ಆ ಪ್ರದೇಶದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

2017ರಲ್ಲಿ ಸೆಲ್ವಿ ಪೆರಂಬೂರಿನ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಈಕೆಗೆ 9 ತಿಂಗಳು ಮಗುವಿದೆ. ಡಿಸೆಂಬರ್ 17ರಂದು ತನ್ನ ತವರು ಮನೆಗೆ ಬಂದಿದ್ದಳು. ಅಂದು ರಾತ್ರಿ ಊಟ ಮಾಡಿ ಬಿಲ್ಡಿಂಗ್‍ನ 2ನೇ ಅಂತಸ್ತಿನ ಮೇಲೆ ನಿಂತುಕೊಂಡು ಪತಿಯ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದಳು. ಈ ವೇಳೆ ಆಯತಪ್ಪಿ ಕಟ್ಟಡದಿಂದ ಸೆಲ್ವಿ ಕೆಳಗೆ ಬಿದ್ದಿದ್ದಾಳೆ. ಆಕೆಯ ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

ತಕ್ಷಣ ಮನೆಯವರು ಹೊರಗೆ ಬಂದು ನೋಡಿದ್ದಾರೆ. ಆಗ ಮಗಳು ಬಿದ್ದಿರುವುದನ್ನು ನೋಡಿ ಗಾಬರಿಯಾಗಿದ್ದಾರೆ. ನಂತರ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾಳೆ. ಮಾಹಿತಿ ತಿಳಿದು ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *