Connect with us

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ- ಎಲ್ಲಿ, ಎಷ್ಟಿದೆ?

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ- ಎಲ್ಲಿ, ಎಷ್ಟಿದೆ?

ನವದೆಹಲಿ: ಒಂದು ದಿನದ ವಿರಾಮದ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಈ ತಿಂಗಳಲ್ಲಿ 9ನೇ ಬಾರಿ ಬೆಲೆ ಹೆಚ್ಚಳ ಆದಂತಾಗಿದೆ. ಇಂದು ಪೆಟ್ರೋಲ್ 24 ಪೈಸೆ, ಡೀಸೆಲ್ 27 ಪೈಸೆಯಷ್ಟು ಬೆಲೆ ಹೆಚ್ಚಳವಾಗಿದೆ.

ಬೆಲೆ ಹೆಚ್ಚಳದಿಂದಾಗಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 95.33, ಡೀಸೆಲ್ 87.92 ರೂ.ಗೆ ತಲುಪಿದೆ. ದೆಹಲಿಯಲ್ಲಿ ಸರ್ವಕಾಲಿಕ ದಾಖಲೆ ಬರೆದಿದ್ದು, ಪೆಟ್ರೋಲ್ 92.58 ರೂ, ಡೀಸೆಲ್ 83.22 ರೂ.ಗೆ ತಲುಪಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 100ರೂ.ಗಳನ್ನು ದಾಟಿದೆ.

ಪ್ರಸ್ತುತ ಬೆಲೆ ಏರಿಕೆಯಿಂದಾಗಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 100 ರೂ.ಗೆ ಹತ್ತಿರವಾಗಿದ್ದು, ಪೆಟ್ರೋಲ್ 98.88 ರೂ. ಹಾಗೂ ಡೀಸೆಲ್ 90.40 ರೂ.ಗಳಿಗೆ ತಲುಪಿದೆ.

ಸ್ಥಳೀಯ ತೆರಿಗೆಗಳಾದ ವ್ಯಾಟ್ ಹಾಗೂ ಸರಕು ಶುಲ್ಕವನ್ನು ಆಧರಿಸಿ ಇಂಧನ ಬೆಲೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ರಾಜಸ್ಥಾನ ದೇಶದಲ್ಲೇ ಅತಿ ಹೆಚ್ಚು ಮೌಲ್ಯವರ್ಧಿತ ತೆರಿಗೆ(ವ್ಯಾಟ್) ವಿಧಿಸುತ್ತದೆ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ ಇದೆ. ಹೀಗಾಗಿ ಈ ಎರಡು ರಾಜ್ಯಗಳ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರೂ.ದಾಟಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚಿಲ್ಲರೆ ಮಾರಾಟದ ಬೆಲೆಯಲ್ಲಿ ಪೆಟ್ರೋಲ್‍ನ ಶೇ.60 ಹಾಗೂ ಡೀಸೆಲ್‍ನ ಶೇ.54ಕ್ಕಿಂತ ಹೆಚ್ಚು ತೆರಿಗೆ ವಿಧಿಸುತ್ತವೆ. ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 32.90 ರೂ. ಹಾಗೂ ಡೀಸೆಲ್ ಮೇಲೆ 31.80 ರೂ. ಅಬಕಾರಿ ಸುಂಕವನ್ನು ವಿಧಿಸುತ್ತದೆ.

Advertisement
Advertisement