Thursday, 18th July 2019

ಭೂಮಿಯಲ್ಲಿ ಭಾರೀ ಬಿರುಕು- ಮಣಿಪಾಲದ ಜನತೆಯಲ್ಲಿ ಆತಂಕ

ಉಡುಪಿ: ಜಿಲ್ಲೆಯ ಮಣಿಪಾಲದಲ್ಲಿ ಭೂಮಿ ಬಿರುಕು ಬಿಟ್ಟಿದೆ. ಮಣಿಪಾಲ ವ್ಯಾಪ್ತಿಯ ಮಂಚಿಕೆರೆ ಎಂಬಲ್ಲಿ ಕಿ.ಮೀ ಗಟ್ಟಲೆ ಭೂಮಿ ಬಾಯ್ತೆರೆದಿದೆ. ಭೂಮಿಯ ಬಿರುಕು ಜನರಿಗೆ ಆತಂಕ ಸೃಷ್ಟಿಸಿದೆ. ಭೂಮಿಯ ಬಿರುಕು ಹಾದು ಹೋದ ಪಕ್ಕದಲ್ಲಿರುವ ಎರಡು ಮನೆಗಳ ಗೋಡೆಗಳೆಲ್ಲಾ ಬಿರುಕಾಗಿದೆ.

ಮಣಿಪಾಲ ವ್ಯಾಪ್ತಿಯ ಮಂಚಿಕೆರೆಯ ಮನೆಗಳ ಬಾವಿಯ ಕಟ್ಟೆ, ಮನೆಯ ಅಂಗಳ, ಕಾಂಪೌಂಡ್ ಗೋಡೆ, ಡಾಂಬಾರು ರಸ್ತೆಯಲ್ಲೂ ಬಿರುಕಾಗಿದೆ. 4 ವರ್ಷದ ಹಿಂದೆ ಭೂಸ್ತರ ಬದಲಾವಣೆಯಿಂದ ಭೂಮಿಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಭಾರೀ ಬಿರುಕು ಕಾಣಿಸಿಕೊಂಡಿದ್ದು ಜನರಲ್ಲಿ ಭೀತಿ ಉಂಟಾಗಿದೆ. ಕಳೆದ ರಾತ್ರಿ ದೊಡ್ಡ ಸದ್ದೊಂದು ಕೇಳಿ ಬಂದಿದ್ದು, ಮನೆ ಮಂದಿ ಹೊರಗಡೆ ಓಡಿ ಬಂದಿದ್ದಾರೆ. ಆದ್ರೆ ಶಬ್ದ ಎಲ್ಲಿಂದ ಬಂತೆಂದು ಯಾರಿಗೂ ಗೊತ್ತಾಗಿಲ್ಲ.

ಸ್ಥಳೀಯ ಉಮೇಶ್ ಎಂಬವರು ಮಾತನಾಡಿ, ನಾವು ಹುಟ್ಟಿ ಬೆಳೆದದ್ದು ಮಂಚಿಕೆರೆಯಲ್ಲೇ, ಕಳೆದ ಮೂರ್ನಾಲ್ಕು ವರ್ಷದಿಂದ ಅಲ್ಲಲ್ಲಿ ಭೂಮಿ ಬಿರುಕು ಬಿಟ್ಟದ್ದು ಗಮನಿಸಿದ್ದೇನೆ. ಆದ್ರೆ ಈಗ ಬಿದ್ದಿರುವ ಬಿರುಕು ಆತಂಕ ಮೂಡಿಸಿದೆ. ದೊಡ್ಡ ಪ್ರಮಾಣದ ಕಣಿವೆಯ ರೀತಿಯಲ್ಲಿ ಇದು ಕಾಣಿಸುತ್ತಿದೆ. ಮಕ್ಕಳು ಓಡಾಡುವಾಗ ಭಯವಾಗುತ್ತದೆ ಎಂದು ಹೇಳಿದರು. ಅನಿಲ್ ಮಾತನಾಡಿ, ಇಲ್ಲಿ ಮನೆ ನಿರ್ಮಾಣಕ್ಕೆ ಪಂಚಾಂಗ ಹಾಕಿದ್ದರು. ಆದ್ರೆ ಪಂಚಾಂಗವನ್ನು ಸೀಳಿಕೊಂಡು ಬಿರುಕು ಹಾದು ಹೋಗಿರುವುದರಿಂದ ಆತಂಕವಾಗಿದೆ. ಮನೆ ಕಟ್ಟಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವ ಬದಲು ಬಾಡಿಗೆ ಮನೆಯಲ್ಲೇ ಇರಲು ಜನ ತೀರ್ಮಾನಿಸಿದ್ದಾರೆ ಎಂದರು.

ಉಡುಪಿ ಜಿಲ್ಲಾ ಭೂಗರ್ಭ ಶಾಸ್ತ್ರಜ್ಞರು, ಗಣಿ ಇಲಾಖೆಯ ಅಧಿಕಾರಿಗಳು, 80 ಬಡಗುಬೆಟ್ಟು ಪಿಡಿಒ, ಜನಪ್ರತಿನಿಧಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಭೂಮಿ ಬಿರುಕು ಆದಲ್ಲೆಲ್ಲಾ ಹೋಗಿ ಮಾಹಿತಿ ಕಲೆ ಹಾಕಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಪರಿಶೀಲನೆ ನಡೆಸಿದ 7 ಮಂದಿ ಅಧಿಕಾರಿಗಳ ತಂಡ ಜಿಲ್ಲಾಧಿಕಾರಿಗೆ ವರದಿ ಕೊಡಲು ಮುಂದಾಗಿದೆ.

ಬೇಸಿಗೆಯಲ್ಲಿ ಅಂತರ್ಜಲದ ಮಟ್ಟ ಕುಸಿತವಾದಾಗ ಭೂಮಿಯ ಎರಡನೇ ಪದರದ ಕುಸಿತ ಆಗುತ್ತದೆ. ಮೇಲ್ಭಾಗದಲ್ಲಿ ಕೆಂಪು ಕಲ್ಲಿನ ಪದರವಿದ್ದಾಗ ಭೂ ಕುಸಿತವಾಗಿದ್ದು ಕಾಣಿಸುತ್ತದೆ. ಕೆಂಪು ಕಲ್ಲು ಪದರದ ಮೇಲೆ ಮಣ್ಣು ಇದ್ರೆ ಜನರ ಗಮನಕ್ಕೆ ಬರುವುದಿಲ್ಲ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಬಿರುಕಿನ ಸ್ಥಳದಲ್ಲಿ ಮನೆ ಕಟ್ಟದಿರುವುದು ಒಳ್ಳೆಯದು ಎಂದು ಹಿರಿಯ ಭೂ ವಿಜ್ಞಾನಿ ರಾನ್ ಜಿ ನಾಯ್ಕ ಹೇಳಿದ್ದಾರೆ.

ಮಂಚಿಕೆರೆಯ ಪಕ್ಕದಲ್ಲಿ ರಮೇಶ್ ಎಂಬವರು ಮನೆ ಕಟ್ಟಿಕೊಂಡಿದ್ದು ಮನೆಯ ಗೋಡೆಗಳೆಲ್ಲಾ ಬಿರುಕಾಗಿದೆ. ಹಿಂಭಾಗದ ಗೋಡೆ, ಟೆರೇಸ್ ಮೇಲೆ ಹತ್ತುವ ಸ್ಟೆಪ್ಸ್, ಬಾವಿಯ ಕಟ್ಟೆ, ಮನೆಯ ಕಂಪೌಂಡ್ ಕ್ರ್ಯಾಕ್ ಆಗಿದೆ. ಸ್ಥಳೀಯ 80 ಬಡಗುಬೆಟ್ಟು ಪಂಚಾಯತ್ ಪಿಡಿಒ, ಅಧ್ಯಕ್ಷರು ಮನೆಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಮೇಶ್, ಮನೆ ನಿರ್ಮಾಣದಲ್ಲಿ ಆದ ಲೋಪದಿಂದ ಈ ಕ್ರ್ಯಾಕ್ ಆಗಿರಬಹುದು ಎಂದು ಮೊದಲು ಭಾವಿಸಿದ್ದೆ. ಆದ್ರೆ ಭೂಮಿಯ ಬಿರುಕಿನಿಂದ ಹೀಗಾಗಿದೆ. ಮನೆ ಬಿರುಕಾಗಿರುವುದು ಗಮನಕ್ಕೆ ಬಂದಿದೆ. ಮನೆ ಕಟ್ಟಿಸಿದ ಇಂಜಿನಿಯರ್ ಅಭಿಪ್ರಾಯ ಪಡೆದು ಮುಂದೆ ಏನು ಎಂದು ತೀರ್ಮಾನಿಸುವುದಾಗಿ ಹೇಳಿದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Leave a Reply

Your email address will not be published. Required fields are marked *