Connect with us

Latest

ಪಾಕಿಸ್ತಾನದಿಂದ ಹಾರಿ ಬಂದ ಪಾರಿವಾಳ!

Published

on

ಚಂಡೀಗಢ: ಪಾಕಿಸ್ತಾನದಿಂದ ಹಾರಿ ಬಂದಿದೆ ಎನ್ನಲಾದ ಪಾರಿವಾಳವನ್ನು ಪಂಜಾಬ್ ರಾಜ್ಯದ ಅಜನಾಲಾ ಕ್ಷೇತ್ರದ ದಯಾಲಪುರ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.

ದಯಾಲಪುರ ಗ್ರಾಮದ ಮುಖಂಡ ಜಸ್ಬೀರ್ ಸಿಂಗ್ ಎಂಬವರ ಮನೆಯಂಗಳದಲ್ಲಿ ಪಾರಿವಾಳ ಕಾಣಿಸಿಕೊಂಡಿತ್ತು. ಪಾರಿವಾಳದ ಕಾಲಿಗೆ ಗುಲಾಬಿ ಬಣ್ಣದ ಬ್ಯಾಂಡ್ ಕಟ್ಟಲಾಗಿತ್ತು. ಬ್ಯಾಂಡ್‍ನಲ್ಲಿ 03404061730 ಎಂಬ ಮೊಬೈಲ್ ನಂಬರ್ ಜೊತೆಗೆ ಶಕೀಲ್ ಎಂಬ ಹೆಸರನ್ನು ಬರೆಯಲಾಗಿತ್ತು.

ಮೊದಲಿಗೆ ಮನೆಯಂಗಳದಲ್ಲಿ ಪಾರಿವಾಳ ಕಾಣಿಸಿಕೊಂಡಾಗ ಜಸ್ಬೀರ್ ಸಿಂಗ್ ಅದರತ್ತ ಲಕ್ಷ್ಯ ನೀಡಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಬೇರೆ ಪಾರಿವಾಳಗಿಂತ ಭಿನ್ನವಾಗಿ ಕಂಡಿದ್ದರಿಂದ ಕಾಳು ನೀಡಿ ಹಿಡಿದಿದ್ದಾರೆ. ಆದ್ರೆ ಪಾರಿವಾಳ ಹೆಚ್ಚು ದೂರ ಹಾರುವ ಶಕ್ತಿ ಹೊಂದಿರದ ಕಾರಣ ಜಸ್ಬೀರ್ ಕೈಗೆ ಸಿಕ್ಕಿದೆ. ಬ್ಯಾಂಡ್‍ನಲ್ಲಿ ಅನುಮಾನಾಸ್ಪದ ನಂಬರ್ ಹಾಗೂ ಹೆಸರು ಬರೆದಿದ್ದರಿಂದ ಸ್ಥಳೀಯ ಗಗ್ಗೋಮಾಹಲ್ ಪೊಲೀಸರ ವಶಕ್ಕೆ ಪಾರಿವಾಳವನ್ನು ನೀಡಿದ್ದಾರೆ.

ಅನುಮಾನಾಸ್ಪದ ರೀತಿಯಲ್ಲಿ ಹಾರಿ ಬಂದ ಪಾರಿವಾಳವನ್ನು ವಶಕ್ಕೆ ಪಡೆದಿರುವ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗಿದೆ. ಅಲ್ಲದೇ ಪಾರಿವಾಳ ಕುರಿತಾಗಿ ಸ್ಥಳೀಯರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಗಗ್ಗೋಮಾಹಲ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸುಖ್‍ದೇವ್ ಸಿಂಗ್ ತಿಳಿಸಿದ್ದಾರೆ.