Monday, 20th August 2018

ಬ್ರೇಕ್ ಫೇಲ್ ಆಗಿ ಪಾದಚಾರಿಗೆ ಗುದ್ದಿ ಅಂಗಡಿಗೆ ನುಗ್ಗಿತು ಬಸ್!

ಕೊಡಗು: ಬ್ರೇಕ್ ಫೇಲ್ ಆಗಿ ಖಾಸಗಿ ಬಸ್ಸೊಂದು ಪಾದಚಾರಿಗೆ ಡಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ ಘಟನೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ.

ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಘಟನೆ ನಡೆದಿದ್ದು, ಬಸ್ ಡಿಕ್ಕಿ ಹೊಡೆದ ರಭಸಕ್ಕೆ ರಾಜೇಶ್ (21) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

 

ಕುಶಾಲನಗರದ ಪ್ರವಾಸಿ ಮಂದಿರದ ರಸ್ತೆಯಲ್ಲಿ ಬ್ರೇಕ್ ಫೇಲ್ ಆಗಿದ್ದ ಬಸ್ ವೇಗವಾಗಿ ಬರುತಿತ್ತು. ಬಸ್ ನಿಯಂತ್ರಣ ಕಳೆದುಕೊಂಡಿದೆ ಎನ್ನುವ ವಿಚಾರ ತಿಳಿದು ಜನ ಕೂಡಲೇ ಚದುರಿದ್ದಾರೆ. ಈ ವೇಳೆ ರಾಜೇಶ್ ಪಾರಾಗಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲೇ ಬಸ್ ರಾಜೇಶ್ ಗೆ ಗುದ್ದಿದೆ.

ಬಸ್ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ. ದಾರಿಯ ಮಧ್ಯದಲ್ಲಿಯೇ ಬಸ್ ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಹೀಗಾಗಿ ಸಾರ್ವಜನಿಕರು ಬಸ್ ಅನ್ನು ಸ್ಥಳಾಂತರಗೊಳಿಸಿದ್ದಾರೆ.

ಈ ಕುರಿತು ಕುಶಾಲನಗರದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜೇಶ್ ಶವವನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಬಸ್ ಮಾಲೀಕರು ಆಸ್ಪತ್ರೆಗೆ ಆಗಮಿಸಿ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಮೃತನ ಕುಟುಂಬದವರು ಪ್ರತಿಭಟನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *