Crime
ಮೃತ ಪತ್ನಿಯ ಫೋಟೋ ಎದುರು ಸೆಲ್ಫಿ ಕ್ಲಿಕ್ಕಿಸಿ ಪ್ರಾಣ ಬಿಟ್ಟ ಪತಿ

ಪಾಟ್ನಾ: ಮೃತಪಟ್ಟ ಪತ್ನಿಯ ಫೋಟೋದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಟ್ನಾದ ಹಾಜಿಪುರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದವನನ್ನು ಅಮ್ರೆಶ್ ಎಂದು ಗುರುತಿಸಲಾಗಿದೆ. ಈತ ಲೈವ್ ವೀಡಿಯೋ ಮೂಲಕ ಮಾತನಾಡುತ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಮುನ್ನ ಅಮ್ರೆಶ್ ತನ್ನ ಹೆಂಡತಿಯ ಫೋಟೋದೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಅಮ್ರೆಶ್ನ ಪತ್ನಿ 3 ವರ್ಷಗಳ ಹಿಂದೆ ನಿಧನಳಾಗಿದ್ದಳು. ಅಮ್ರೆಶ್ ಪತ್ನಿ ತೀರಿಕೊಂಡಾಗಿನಿಂದಲೂ ಆಘಾತಕ್ಕೊಳಗಾಗಿದ್ದನು. ಪತ್ನಿಯ ಯೋಚನೆಯಲ್ಲಿಯೆ ಸದಾ ಮುಳುಗಿರುತ್ತಿದ್ದನು. ಈ ಹಿಂದೆ ಅಮ್ರೆಶ್ ತನ್ನ ಅತ್ತಿಗೆಯೊಂದಿಗೆ ಸಂಬಂಧ ಹೊಂದಿದ್ದನು. ಕೆಲವು ವಿಚಾರವಾಗಿ ಅತ್ತಿಗೆಯೊಂದಿಗೆ ಜಗಳ ಮಾಡಿಕೊಂಡಿದ್ದನು. ಆತ್ಮಹತ್ಯೆಗೆ ಮುಂಚೆಯೇ ಮೃತ ಪತ್ನಿಯೊಂದಿಗೆ ಸೆಲ್ಫಿ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಇವನ ಸಾವಿಗೆ ನಿಖರವಾದ ಕಾರಣ ತಿಳಿಯುತ್ತಿಲ್ಲ ಎಂದು ಗ್ರಾಮದ ಜನರು ಹೇಳುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಮೃತ ಅಮ್ರೆಶ್ ಶವವನ್ನು ಪರೀಕ್ಷೆಗಾಗಿ ಹಾಜಿಪುರ ಸದರ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈಗ ಪೊಲೀಸರು ಇಡೀ ಪ್ರಕರಣದ ತನಿಖೆ ಆರಂಭಿಸಿದ್ದಾರೆ.
