Connect with us

Latest

ಪರಮೇಶ್ವರ್‍ಗೇ ‘ಕೈ’ ಪಟ್ಟ – ಗೃಹ ಸಚಿವ ಸ್ಥಾನ ತ್ಯಜಿಸಲು ಹೈಕಮಾಂಡ್ ಸೂಚನೆ

Published

on

ನವದೆಹಲಿ: ಕೆಪಿಸಿಸಿ ಅಧ್ಯಕ್ಷರಾಗಿ ಜಿ.ಪರಮೇಶ್ವರ್ ಅವರನ್ನೇ ಮುಂದುವರೆಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಆದರೆ ಕೈ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈಕಮಾಂಡ್ ಸಚಿವ ಸ್ಥಾನ ತ್ಯಜಿಸಬೇಕು ಎಂಬ ಸೂತ್ರವನ್ನು ಮುಂದಿಟ್ಟಿದೆ ಎಂದು ವಿಶ್ವಸನೀಯ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಪರಮೇಶ್ವರ್ ಮುಂದುವರಿಕೆಗೆ ಹೈಕಮಾಂಡ್ ನಿರ್ಧಾರ ಮಾಡಿದ್ದು, ಪರಮೇಶ್ವರ್ ಅವರನ್ನ ಬದಲಾಯಿಸಿದರೆ ದಲಿತರು ಮುನಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಮುಂದೆ ಚುನಾವಣಾ ವರ್ಷ ಇದೆ. ಹೀಗಾಗಿ ಈಗ ಪರಮೇಶ್ವರ್ ಅವರನ್ನು ಬದಲಾಯಿಸಿದರೆ ದಲಿತ ಸಮುದಾಯದವರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದರಿಂದ ಮುಂದಿನ ಚುನಾವಣೆ ವೇಳೆ ಪಕ್ಷದ ವೋಟ್ ಬ್ಯಾಂಕ್‍ಗೆ ತೊಂದರೆ ಎದುರಾಗಲಿದೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಪರಮೇಶ್ವರ್ ಮುಂದುವರೆಸುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ನೇಮಕಕ್ಕೆ ಒಮ್ಮತ ಮೂಡಲಿಲ್ಲ. ಡಿಕೆಶಿಗೆ ಹಲವು ಹಿರಿಯ ಮುಖಂಡರಿಂದ ವಿರೋಧ ವ್ಯಕ್ತವಾಯಿತು. ಹೀಗಾಗಿ ಪರಮೇಶ್ವರ್ ಮುಂದುವರಿಕೆ ಹೈಕಮಾಂಡ್ ಸೂತ್ರ ಸಿದ್ಧಪಡಿಸಿದೆ.

ಸಚಿವ ಸ್ಥಾನ ತೊರೆಯಲು ಪರಮೇಶ್ವರ್‍ಗೆ ಹೈಕಮಾಂಡ್ ಸೂಚನೆ ನೀಡಿದ್ದು, ಗೃಹ ಖಾತೆ ಮತ್ತೆ ಕೆಜೆ ಜಾರ್ಜ್ ಹೆಗಲಿಗೇರುವ ಸಾಧ್ಯತೆ ನಿಚ್ಚಳವಾಗಿದೆ. ಸಿದ್ದರಾಮಯ್ಯನವರ ಅಭ್ಯರ್ಥಿ ಎಸ್.ಆರ್ ಪಾಟೀಲ್ ಅವರನ್ನು ಪರಿಷತ್ ಸಭಾಪತಿ ಹುದ್ದೆಗೆ ತರಲು ಚಿಂತನೆ ನಡೆದಿದೆ. ಸಚಿವ ಸೀತಾರಾಮ್‍ಗೆ ಪರಿಷತ್ ಸಭಾನಾಯಕನ ಹೊಣೆ, ಮೇಲ್ವರ್ಗದ ನಾಯಕರಿಗೆ ಪ್ರಚಾರ ಸಮಿತಿ ಮತ್ತು ಅಭ್ಯರ್ಥಿ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಇಂದು ರಾಹುಲ್ ಗಾಂಧಿ ಜೊತೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎನ್ನಲಾಗಿದೆ.

ಇದೇ ವೇಳೆ ಸಭೆ ಬಳಿಕ ದೆಹಲಿಯಲ್ಲಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಯಾರೇ ಅಧ್ಯಕ್ಷರಾದ್ರೂ ಅವರ ಜೊತೆ ಕೆಲಸ ಮಾಡಲು ಸಿದ್ಧ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದ್ದಾರೆ.

ಮೂವರ ನಡುವೆ ಇತ್ತು ಪೈಪೋಟಿ: ದಲಿತ ಸಮುದಾಯದ ಬೆಂಬಲದೊಂದಿಗೆ ಮತ್ತೊಂದು ಅವಧಿಗೆ ಅಧ್ಯಕ್ಷರಾಗಲು ಪರಮೇಶ್ವರ್ ಕಸರತ್ತು ಮಾಡ್ತಿದ್ರೆ, ಒಕ್ಕಲಿಗರ ಜೊತೆ ಉಪಚುನಾವಣೆಗಳಲ್ಲಿ ಕೆಲಸ ಮಾಡಿ ಜಯದ ಹುಮ್ಮಸ್ಸಿನಲ್ಲಿರೋ ಇಂಧನ ಸಚಿವ ಡಿಕೆ ಶಿವಕುಮಾರ್ ತಮ್ಮ ಪ್ರಭಾವ ಬೀರಿ ಮತ್ತೊಂದು ಕಡೆ ಲಾಬಿ ಮಾಡಿದ್ದರು. ಇನ್ನೊಂದು ಕಡೆ ಸಿಎಂ ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಆಪ್ತ ಸಚಿವ ಎಂ.ಬಿ. ಪಾಟೀಲ್ ಪರ ಬ್ಯಾಟಿಂಗ್ ಮಾಡಲು ಮುಂದಾಗಿದ್ದರು.

ಸಚಿವ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರನ್ನು ಭೇಟಿಯಾಗಿದ್ದರು. ಆಶ್ಚರ್ಯ ಎಂಬಂತೆ ರವಿವಾರ ಸಿಎಂ ದೆಹಲಿಗೆ ತೆರಳುವ ವೇಳೆ ಅಧ್ಯಕ್ಷ ಆಕಾಂಕ್ಷಿಗಳಾದ ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಕೂಡ ಜೊತೆಯಲ್ಲೇ ಪ್ರಯಾಣ ಬೆಳೆಸಿದ್ದರು.