Connect with us

Districts

ಹಾಸನ ಜಿಲ್ಲೆಗೆ ರಾಷ್ಟ್ರೀಯ ಪುರಸ್ಕಾರ ಹಸ್ತಾಂತರ

Published

on

ಹಾಸನ: ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಪುರಸ್ಕಾರಕ್ಕೆ ಹಾಸನ ಜಿಲ್ಲೆ ಆಯ್ಕೆಯಾಗಿತ್ತು. ಇಂದು ರಾಜ್ಯದಲ್ಲೇ ಉತ್ತಮ ಸಾಧನೆಗಾಗಿ ಜಿಲ್ಲೆಗೆ ಅಧಿಕೃತವಾಗಿ ರಾಷ್ಟ್ರೀಯ ಪ್ರಶಸ್ತಿ ಹಸ್ತಾಂತರಗೊಂಡಿದೆ.

ರಾಷ್ಟ್ರೀಯ ಪಂಚಾಯತ್ ರಾಜ್ ದಿವಸದ ಅಂಗವಾಗಿ ನವದೆಹಲಿಯಲ್ಲಿ ನಡೆಯಬೇಕಿದ್ದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕೋವಿಡ್ -19 ಹಿನ್ನೆಲೆಯಲ್ಲಿ ವರ್ಚುವಲ್ ವೇದಿಕೆ ಮುಖಾಂತರ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ನರೇಂದ್ರ ಸಿಂಗ್ ತೋಮರ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮೀಣ ಸಶಕ್ತೀಕರಣ ಪ್ರಶಸ್ತಿಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿ ಮಾತನಾಡಿದರು, ಪ್ರಶಸ್ತಿ ವಿಜೇತ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ಅದರ ಅಧಿಕಾರಿಗಳಿಗೆ ಶುಭ ಕೋರಿದರು. ದೇಶದ ಶಕ್ತಿ ಗ್ರಾಮಗಳಲ್ಲಿದ್ದು ಹಳ್ಳಿಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಸಂಪೂರ್ಣ ಪ್ರಗತಿ ಸಾಧ್ಯ. ಹಳ್ಳಿಗಳು ಮತ್ತು ಬಡವರ ಉದ್ಧಾರ ಸರ್ಕಾರದ ಆದ್ಯತೆ. ಆ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ ಅವುಗಳನ್ನು ಸಕಾಲದಲ್ಲಿ ಅರ್ಹರಿಗೆ ತಲಿಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಇದಕ್ಕೆ ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ಸಂಪೂರ್ಣ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಹಾಗಾಗಿ ಈ ಕಾರ್ಯದಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡುವ, ಸಮರ್ಪಕ ಸಾಧನೆ ಮಾಡುವ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ಅಧಿಕಾರಿಗಳನ್ನು ಪ್ರೋತ್ಸಾಹಿಸಲು ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಇನ್ನಷ್ಟು ಮಾದರಿಯಾಗಿ ಕೆಲಸ ಮಾಡಿ ಎಂದು ಪ್ರಧಾನಿ ಕರೆ ನೀಡಿದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರು ಪಂಚಾಯಿತಿ ಸಶಕ್ತೀಕರಣ ಯೋಜನೆಯ ಉದ್ದೇಶ, ಆಶಯ ಆಯ್ಕೆ ಸ್ವರೂಪ ಪ್ರಶಸ್ತಿ ಪಡೆವ ಸಂಸ್ಥೆಗಳ ಜವಾಬ್ದಾರಿಗಳನ್ನು ವಿವರಿಸಿ ಎಲ್ಲಾ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು, ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಅಭಿನಂದಿಸಿದರು.

ದೆಹಲಿಯಲ್ಲಿ ಸಾಂಕೇತಿಕವಾಗಿ ಪ್ರಶಸ್ತಿ ವಿತರಣೆ ಹಾಗೂ ಪ್ರಶಸ್ತಿ ಮೊತ್ತವನ್ನು ಆಯಾಯ ಜಿಲ್ಲಾ ಪಂಚಾಯತಿಗಳಿಗೆ ಆನ್ ಲೈನ್ ಮೂಲಕ ವರ್ಗಾವಣೆ ಮಾಡಿದ ನಂತರ ಇತ್ತ ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರಿಗೆ ಪ್ರಶಸ್ತಿ ಫಲಕವನ್ನು ಹಸ್ತಾಂತರ ಮಾಡಿ ಅಭಿನಂದನೆ ಸಲ್ಲಿಸಿದರು.

ಇದೊಂದು ಹೆಮ್ಮೆಯ ಸಾಧನೆ. ಜಿಲ್ಲೆಗೆ ಸಂದ ಗೌರವ ಇದಕ್ಕೆ ಕಾರಣರಾದ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಪಂಚಾಯತಿ ಸಿ.ಇ.ಒ ಇತರ ಜಿಲ್ಲಾ ಹಾಗೂ ತಾಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳನ್ನು ತಾವು ಅಭಿನಂದಿಸುವುದಾಗಿ ಆರ್.ಗಿರೀಶ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಿ.ಇ.ಒ ಪರಮೇಶ್ ಅವರು ಸಹ ಪ್ರಶಸ್ತಿ ಬಂದ ಬಗ್ಗೆ ಸಂತಸ ವ್ಯಕ್ತಪಡಿಸಿ ಈ ಸಾಧನೆಗೆ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ಶಾಸಕರು, ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಇತರ ಎಲ್ಲಾ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಚಂದ್ರಶೇಖರ್, ಮಹೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಾಗರಾಜ್, ಯೋಜನಾ ನಿರ್ದೇಶಕರಾದ ವಿಠಲ ಕಾವಳೆ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಮತ್ತಿತರರು ಹಾಜರಿದ್ದರು.

Click to comment

Leave a Reply

Your email address will not be published. Required fields are marked *