Tuesday, 21st May 2019

ಪಾಕಿಸ್ತಾನಕ್ಕೂ ಪ್ರೇರಣೆಯಾದ ರಾಹುಲ್ ದ್ರಾವಿಡ್!

ಇಸ್ಲಾಮಾಬಾದ್: ಟೀಂ ಇಂಡಿಯಾ ಅಂಡರ್ 19 ಹಾಗೂ ಎ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಅವರು ಪಾಕಿಸ್ತಾನದ ಕ್ರಿಕೆಟ್ ಮಂಡಳಿಗೂ ಪ್ರೇರಣೆಯಾಗಿದ್ದು, ಅವರ ಹಾದಿಯಲ್ಲೇ ಪಿಸಿಬಿ ಕೂಡ ನಡೆಯಲು ನಿರ್ಧರಿಸಿದೆ.

ದ್ರಾವಿಡ್ ಯುವ ತಂಡದ ಆಟಗಾರರಿಗೆ ಕೇವಲ ಕೋಚ್ ಆಗಿ ಮಾತ್ರವಲ್ಲದೇ ಜೀವನದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಯುವ ಆಟಗಾರರು ಕ್ರಿಕೆಟ್ ಹೊರತುಪಡಿಸಿ ಇತರೇ ಕ್ಷೇತ್ರಗಳ ಕೌಶಲ್ಯಗಳಲ್ಲಿ ಪರಿಣಿತಿ ಪಡೆಯಬೇಕು ಎಂದು ದ್ರಾವಿಡ್ ಮನವಿ ಮಾಡಿದ್ದರು.

ಒಬ್ಬ ರಾಷ್ಟ್ರೀಯ ತಂಡದ ಹಿರಿಯ ಆಟಗಾರ ತಂಡದ ಕೋಚ್ ಆದರೆ ಹೇಗೆ ಯುವ ಆಟಗಾರರಿಗೆ ಪ್ರೇರಣೆ ಆಗಬಲ್ಲರು ಎಂದು ಪಿಸಿಬಿಗೆ ರಾಹುಲ್ ಸಾಕ್ಷಿಯಾಗಿದ್ದಾರೆ. ರಾಹುಲ್ ಅವರ ಗರಡಿಯಲ್ಲಿ ಪಳಗಿದ ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಮಯಾಂಕ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೇ ಅಂಡರ್ 19 ವಿಶ್ವಕಪ್ ಟೂರ್ನಿಯನ್ನು ಪೃಥ್ವಿ ಶಾ ನಾಯಕತ್ವ ತಂಡ ಗೆದ್ದು ಬಂದಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.

ಸದ್ಯದ ಒಂದು ವರದಿಯ ಪ್ರಕಾರ ಪಿಸಿಬಿ ಕೂಡ ರಾಹುಲ್ ಅವರ ಪ್ರೇರಣೆಯಂತೆ ತಮ್ಮ ಅಂಡರ್ 19 ತಂಡಗಳಿಗೆ ಯೂನಿಸ್ ಖಾನ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡಲು ತೀರ್ಮಾನಿಸಿದೆ. ಈ ಬಗ್ಗೆ ಪಿಸಿಬಿ ಅಧ್ಯಕ್ಷ ಈಶನ್ ಮನಿ ಪ್ರತಿಕ್ರಿಯೆ ಕೂಡ ನೀಡಿದ್ದು, ಅಂಡರ್ 19 ತಂಡದ ಕೋಚ್ ಆಗಿ ಭಾರತದಲ್ಲಿ ರಾಹುಲ್ ದ್ರಾವಿಡ್ ಅವರು ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.

ವಿದೇಶಿ ಕೋಚ್‍ಗಳಿಗೆ ಹೆಚ್ಚಿನ ಅವಕಾಶವನ್ನು ನೀಡುವ ಬದಲು ದೇಶದ ಸ್ವತಃ ಕೋಚ್‍ಗಳಿಗೆ ಭಾರತ ನೀಡುತ್ತಿರುವ ಅವಕಾಶದಂತೆ ನಮ್ಮಲ್ಲೂ ಪ್ರಾಮುಖ್ಯತೆ ನೀಡಲು ಚಿಂತನೆ ನಡೆದಿದೆ. ತಂಡದ ಆಟಗಾರರು ದೇಶದ ರಾಯಭಾರಿಗಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಸಿಬಿ ಮೊಹಮ್ಮದ್ ಯೂಸುಫ್ ರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲು ಕೂಡ ನಿರ್ಧರಿಸಿದೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *