Thursday, 17th October 2019

ಪಾಕ್ ದುರ್ಯೋಧನ, ಚೀನಾ ದುಶ್ಯಾಶನನಂತೆ ಭಾರತಾಂಬೆಯನ್ನು ಕಾಡುತ್ತಿವೆ: ಪೇಜಾವರ ಶ್ರೀ

ಉಡುಪಿ: ನಮ್ಮ ದೇಶಕ್ಕೆ ಬಂದಿರುವ ಆಂತರಿಕ ತೊಂದರೆ ಹಾಗು ಬಾಹ್ಯ ತೊಂದರೆಯನ್ನು ನಿವಾರಿಸಲು ದೇವರಲ್ಲಿ ವಿಶೇಷ ಪ್ರಾರ್ಥನೆಯನ್ನು ಭಾರತೀಯರು ಮಾಡಬೇಕು. ಬಾಹ್ಯವಾಗಿ ಪಾಕಿಸ್ತಾನ ಹಾಗೂ ಚೈನಾ ದೇಶಗಳು ದುರ್ಯೋಧನ ಮತ್ತು ದುಶ್ಯಾಸನ ರೀತಿಯಲ್ಲಿ ವರ್ತಿಸಿ ಭಾರತ ಮಾತೆಯನ್ನು ಕಾಡುತ್ತ ಇದ್ದಾರೆ ಅಂತ ಪೇಜಾವರ ಶ್ರೀ ಹೇಳಿದ್ದಾರೆ.

ಅವರು ಇಂದು ಸ್ವಾತಂತ್ರ್ಯೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠದಲ್ಲಿ ಧ್ವಜಾರೋಹಣ ಮಾಡಿ ಬಳಿಕ ಮಾತನಾಡಿ, ಶ್ರೀಕೃಷ್ಣನು ಪಾಂಚಾಲಿಗೆ ಅಕ್ಷಯ ವಸ್ತ್ರ ನೀಡಿದ ಹಾಗೆ ಭಾರತ ಮಾತೆಗೆ ಅಕ್ಷಯ ಶಕ್ತಿಯನ್ನು ಕೊಟ್ಟು ದೇಶಾಭಿವೃದ್ಧಿಯಾಗಿ ದೇಶ ಪ್ರಗತಿ ಪಥದಲ್ಲಿ ಮುನ್ನಡೆಯುವಂತೆ ಅನುಗ್ರಹಿಸಲಿ. ನೀರು, ಗಾಳಿ, ಮನುಷ್ಯರು, ಪ್ರಾಣಿಗಳೆಲ್ಲ ಸೇರಿ ಭಾರತ ಮಾತೆಯ ಪ್ರಕೃತಿ ನಿರ್ಮಾಣವಾಗಿದೆ. ಇದನ್ನು ಕಲುಷಿತ ಮಾಡದೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂದೇಶ ನೀಡಿದರು.

1947ರ ಆಗಸ್ಟ್ 15ರ ಮಧ್ಯರಾತ್ರಿ ರಥಬೀದಿಯಲ್ಲಿ ಪುತ್ತಿಗೆ ಮಠದ ಶತಾಯುಷಿ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾಸಮುದ್ರ ತೀರ್ಥ ಸ್ವಾಮೀಜಿಯವರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಮಾನ್ಯ ತೀರ್ಥ ಸ್ವಾಮೀಜಿಯವರು ಹಾಗೂ ಉಳಿದ ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಿರುವುದನ್ನು ನೆನಪಿಸಿದರು.

ಪೇಜಾವರ ಕಿರಿಯ ಸ್ವಾಮೀಜಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಿದರು. ಕೇಸರಿ ಮುಂಡಾಸು-ಬಿಳಿ ಅಂಗಿ- ಹಸಿರು ಕಚ್ಚೆಯಲ್ಲಿ ಕಡೆಗೋಲಿನಲ್ಲಿ ಶ್ರೀಕೃಷ್ಣ ಕಂಗೊಳಿಸುತ್ತಿದ್ದಾನೆ.

Leave a Reply

Your email address will not be published. Required fields are marked *