Tuesday, 17th September 2019

Recent News

ಸಿಎಂ ಆದವರಿಗೆ ಸಿಟ್ಟು, ಕೋಪ ಇರಬಾರದು – ಮಮತಾ ವಿರುದ್ಧ ಪೇಜಾವರ ಶ್ರೀ ಅಸಮಾಧಾನ

ಬಳ್ಳಾರಿ: ಮಮತಾ ಬ್ಯಾನರ್ಜಿಯ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿತ್ತು. ಆದರೆ ಅವರ ವರ್ತನೆಯಿಂದ ಈಗ ನನಗೆ ತುಂಬ ಅಸಮಾಧಾನವಾಗಿದೆ ಎಂದು ಉಡುಪಿಯ ಪೇಜಾವರ ಶ್ರೀಗಳು ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಉಡುಪಿಯ ಪೇಜಾವರ ಶ್ರೀಗಳು, ಮಮತಾ ಬ್ಯಾನರ್ಜಿಯ ಬಗ್ಗೆ ನನಗೆ ತುಂಬ ಅಸಮಾಧಾನವಿದೆ. ಮುಖ್ಯಮಂತ್ರಿಯಾಗಿ ಅವರಿಗೆ ಇಷ್ಟೊಂದು ಕೋಪ, ಸಿಟ್ಟು ಇರಬಾರದು. ಸಿಎಂ ಆದವರು ಇಷ್ಟೊಂದು ಬಿರುಸಿನಿಂದ ಮಾತನಾಡಬಾರದು. ತಾಳ್ಮೆ ಇದ್ದರೆ ಒಳ್ಳೆಯದು. ಅವರ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿತ್ತು. ಆದರೆ ಈಗ ಅವರ ವರ್ತನೆಯಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ.

ರಾಜಕೀಯಕ್ಕಾಗಿ ನುಸುಳುಕೋರರಿಗೆ ಅವಕಾಶ ನೀಡುತ್ತಿದ್ದಾರೆ. ಶ್ರೀರಾಮ ಹೆಸರನ್ನು ವಿವಾದ ಮಾಡುತ್ತಿದ್ದಾರೆ. ಬಾಂಗ್ಲಾದೇಶದಿಂದ ಬಂದವರಿಗೆ ವಿಚಾರಣೆ ಮಾಡದೆ ನಾಗರೀಕ ಹಕ್ಕು ಕೊಡುತ್ತಿದ್ದಾರೆ. ಅದರ ಪರಿಣಾಮ ದೇಶದ ಮೇಲೆ ಆಗುತ್ತದೆ. ಅವರ ನಿಲುವು ರಾಷ್ಟ್ರ ವಿರೋಧಿತನ ತೋರಿಸುತ್ತಿದೆ. ಸಿಎಂ ಆದವರು ಇಷ್ಟೊಂದು ಬಿರುಸಿನಿಂದ ಮಾತನಾಡಬಾರದು ಎಂದು ಮಮತಾ ಬ್ಯಾನರ್ಜಿ ಅವರ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಎರಡನೇ ಅವಧಿಯಲ್ಲಿ ರಾಮಮಂದಿರ ನಿರ್ಮಾಣ ಖಚಿತವಾಗಿದೆ. ರಾಜ್ಯಸಭೆಯಲ್ಲಿ ಬಹುಮತ ಕೊರತೆ ಇದೆ. ಮುಂದಿನ ವರ್ಷ ರಾಜ್ಯಸಭೆಯಲ್ಲಿಯೂ ಬಹುಮತ ಬರಲಿದೆ. ಎಲ್ಲ ಸಂತರೂ ಸೇರಿ ಬಹುತವಿದೆ ಎಂದು ಒತ್ತಡ ಹಾಕುತ್ತೇವೆ. ನನಗೆ ಸುಪ್ರೀಂ ಕೋರ್ಟ್ ಮೇಲೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಗೊಂದಲದಲ್ಲಿದೆ. ಎರಡೂ ಪಕ್ಷಗಳು ಸೇರಿ ಸರ್ಕಾರ ನಡೆಸಲು ತೊಂದರೆಯಾಗುತ್ತದೆ ಎಂದು ನಾನು ಮೊದಲೇ ಹೇಳಿದ್ದೆ. ಬಿಜೆಪಿಯನ್ನೂ ಹೊರಗಿಡಬೇಡಿ. ಸಂವಿಧಾನದ ಪ್ರಕಾರ ಅದು ಕೂಡ ಜಾತ್ಯಾತೀತ ಪಕ್ಷವಾಗಿದ್ದು, ಬಿಜೆಪಿಯೂ ಕೂಡ ಸಂವಿಧಾನವನ್ನು ಒಪ್ಪಿಕೊಂಡಿದೆ. ಹೀಗಾಗಿ ಬಿಜೆಪಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ವರ್ವ ಪಕ್ಷ ಸರ್ಕಾರ ಮಾಡಿದರೆ ಈ ಭಯವೇ ಇರುವುದಿಲ್ಲ ಎಂದರು.

Leave a Reply

Your email address will not be published. Required fields are marked *