Thursday, 21st February 2019

Recent News

ಮಹಾರಾಷ್ಟ್ರ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ನೋಡೋರಿಗೆ ಗುಡ್ ನ್ಯೂಸ್ – ಕರ್ನಾಟಕದಲ್ಲೂ ಈ ನಿಯಮ ಜಾರಿಯಾಗುತ್ತಾ?

ಮುಂಬೈ: ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ನೋಡುವವರು ಹೊರಗಿನ ಆಹಾರವನ್ನು ಕೊಂಡೊಯ್ಯುವಂತಿಲ್ಲ ಎನ್ನುವ ನಿಯಮಕ್ಕೆ ಮಹಾರಾಷ್ಟ್ರ ಸರ್ಕಾರ ಅಂತ್ಯ ಹಾಡಿದೆ.

ಮಹಾರಾಷ್ಟ್ರದ ಸಿನಿಮಾ ಹಾಲ್, ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಗಳಲ್ಲಿ ಜನರು ಹೊರಗಿನ ಆಹಾರವನ್ನು ಕೊಂಡೊಯ್ಯಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಸದ್ಯ ಈ ಕುರಿತ ನಿಯಮಗಳನ್ನು ಶೀಘ್ರ ರಚಿಸುವುದಾಗಿ ತಿಳಿಸಿರುವ ಸರ್ಕಾರ ಈ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಸದ್ಯ ಸರ್ಕಾರದ ನಿರ್ಧಾರ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, ವರದಿ ಅನ್ವಯ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ಮೇಲ್ಮನೆ ಶಾಸಕಾಂಗ ಅಧಿವೇಶನದ ಸಭೆಯಲ್ಲಿ ಎನ್‍ಸಿಪಿ ವಿರೋಧ ಪಕ್ಷದ ನಾಯಕ ಧನಂಜಯ್ ಮುಂಡೆ ಪ್ರಶ್ನೆಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ರವಿಂದ್ರ ಚೌಹಾಣ್ ಶುಕ್ರವಾರದಂದು ಘೋಷಿಸಿದ್ದಾರೆ. ಅಲ್ಲದೇ ಒಂದೇ ತರಹದ ಆಹಾರಗಳಿಗೆ ಬೇರೆ ಬೇರೆ ಬೆಲೆಯನ್ನು ಮಲ್ಟಿಪ್ಲೆಕ್ಸ್ ಅಥವಾ ಹೊರಗಡೆ ಮಾರಾಟ ಮಾಡುವಂತಿಲ್ಲ ಎಂದು ಸಚಿವರು ತಿಳಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಿದೆ.

ಕಳೆದ ತಿಂಗಳು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್) ಕಾರ್ಯಕರ್ತರು ಪುಣೆಯ ಚಿತ್ರಮಂದಿರದಲ್ಲಿ ಆಹಾರಗಳನ್ನು ದುಬಾರಿ ದರದಲ್ಲಿ ಮಾರಾಟ ನಡೆಸಲಾಗುತ್ತಿದೆ ಎಂದು ಚಿತ್ರಮಂದಿರದ ಮ್ಯಾನೇಜರ್‍ನನ್ನು ಥಳಿಸಿದ್ದರು. ಘಟನೆ ಕುರಿತು ಅಂದು ವಿವರಣೆ ನೀಡಿದ್ದ ಎಂಎನ್‍ಎಸ್ ಕಾರ್ಯಕರ್ತ ಕಿಶೋರ್ ಶಿಂಧೆ, ನಾವು ಚಿತ್ರಮಂದಿರದ ಮ್ಯಾನೇಜರ್ ಗೆ ಪತ್ರಿಕಾ ವರದಿಗಳನ್ನು ಓದಲು ಹೇಳಿದ್ದೆವು, ಆದರೆ ಆತ ತನಗೆ ಮರಾಠಿ ಓದಲು ಬರುವುದಿಲ್ಲ ಎಂದು ಹೇಳಿದ್ದ. ಅದ್ದರಿಂದ ಆತನೊಂದಿಗೆ ಎಂಎನ್‍ಎಸ್ ಸ್ಟೈಲ್ ನಲ್ಲಿ ವ್ಯವಹರಿಸಬೇಕಾಯ್ತು ಎಂದು ತಿಳಿಸಿದ್ದರು.

ಈ ಘಟನೆಯ ಬಳಿಕ ಮಹಾರಾಷ್ಟ್ರ ಮಲ್ಟಿಪ್ಲೆಕ್ಸ್ ಮಾಲೀಕ ಸಂಘ ರಾಜಕೀಯ ಪಕ್ಷದ ಕಾರ್ಯಕರ್ತರು ಮಾಲೀಕರ ವಿರುದ್ಧ ನಡೆಸುತ್ತಿರುವ ದಾಳಿ ವಿರುದ್ಧ ತುರ್ತು ವಿಚಾರಣೆ ನಡೆಸಲು ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಈ ಅರ್ಜಿಯನ್ನು ವಿಚಾರಣೆ ನಡೆಸಲು ನ್ಯಾಯಾಲಯ ನಿರಾಕರಿಸಿತ್ತು. ನ್ಯಾಯಾಲಯದ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ಹಾಗೂ ಅನುಜಾ ಪ್ರಭುದೇಸಾಯಿ ಕೂಡ ಈ ವಿಷಯದ ಕುರಿತು ಯಾವುದೇ ನಿರ್ದೇಶನಗಳನ್ನು ನೀಡಲು ನಿರಾಕರಿಸಿದ್ದರು. ಅಲ್ಲದೇ ಯಾವುದೇ ದುಷ್ಕರ್ಮಿಗಳು ರೀತಿಯ ಹಿಂಸಾಚಾರ ನಡೆಸಿದರೆ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು ಎಂದು ಸೂಚಿಸಿದ್ದರು.

ಈ ಘಟನೆಯ ಬೆನ್ನಲ್ಲೇ ಸದ್ಯ ಮಹಾರಾಷ್ಟ್ರ ಸರ್ಕಾರ ಮಲ್ಟಿಪ್ಲೆಕ್ಸ್ ಗಳಲ್ಲಿ ಹೊರಗಿನ ಆಹಾರ ತೆಗೆದುಕೊಂಡು ಹೋಗಲು ಅನುಮತಿ ನೀಡಿದೆ. ಅಲ್ಲದೇ ಈ ಕುರಿತು ನಿಯಮಾವಳಿ ರೂಪಿಸಲು ಸಿದ್ಧತೆ ನಡೆಸಿದೆ. ಸದ್ಯ ಮಹಾರಾಷ್ಟ್ರ ಸರ್ಕಾರದಂತೆ ಕರ್ನಾಟಕದಲ್ಲೂ ಸಿನಿಮಾ ಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಹೊರಗಿನ ಆಹಾರ ತೆಗೆದುಕೊಂಡು ಹೋಗಲು ಅನುಮತಿ ಲಭ್ಯವಾಗುತ್ತಾ ಎಂಬುವುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *