Connect with us

Bengaluru City

5 ವರ್ಷಗಳಲ್ಲಿ 300 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿ: ಡಾ. ಅಶ್ವಥ್ ನಾರಾಯಣ್

Published

on

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಹಾಗೂ ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಹಿನ್ನೆಲೆ ಕರ್ನಾಟಕವು ಅಭಿವೃದ್ಧಿಯಲ್ಲಿ ದಾಪುಗಾಲು ಇಡುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ 300 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿ ಸಾಧಿಸಲಾಗುವುದು ಎಂದು ಐಟಿ-ಬಿಟಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದರು.

ಬೆಂಗಳೂರಿನಲ್ಲಿ ಭಾನುವಾರ ನಡೆದ ಬೆಂಗಳೂರು ಟೆಕ್ ಸಮ್ಮಿಟ್ (ಬಿಟಿಎಸ್)-2020 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸದ್ಯಕ್ಕೆ 52 ಶತಕೋಟಿ ಡಾಲರ್‍ವಷ್ಟು ಡಿಜಿಟಲ್ ಆರ್ಥಿಕತೆಯ ಗುರಿಯನ್ನು ರಾಜ್ಯವು ದಾಟಿದೆ. ಮುಂದಿನ ಪಂಚವರ್ಷಗಳಲ್ಲಿ ಈ ನಿಟ್ಟಿನಲ್ಲಿ ಹಾಕಿಕೊಂಡಿರುವ ಗುರಿಯನ್ನು ಮುಟ್ಟಲು ಎಲ್ಲ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು.

ಮೋದಿ ಅವರು ನಿಗದಿಪಡಿಸಿರುವ ಒಂದು ಟ್ರಿಲಿಯನ್ ಡಿಜಿಟಲ್ ಆರ್ಥಿಕತೆಯ ಗುರಿಗೆ ಹೆಚ್ಚಿನ ಕೊಡುಗೆ ನೀಡಲು ಕರ್ನಾಟಕ ಸನ್ನದ್ಧವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಸುಧಾರಣೆಗಳನ್ನು ಕೈಗೊಂಡು ಐಟಿ-ಬಿಟಿ ಸೇರಿದಂತೆ ಸರ್ವ ಕ್ಷೇತ್ರಗಳಲ್ಲೂ ಸುಧಾರಣೆಗಳನ್ನು ತರಲಾಗಿದೆ. ನಿಗದಿತ ಗುರಿಯನ್ನು ತಪ್ಪದೇ ಮುಟ್ಟಲಾಗುವುದು ಎಂದು ಉಪಮುಖ್ಯಮಂತ್ರಿ ಸ್ಪಷ್ಟವಾಗಿ ಹೇಳಿದರು.

* ಡಿಜಿಟಲ್ ಆರ್ಥಿಕತೆಯ ಗುರಿ ತಲುಪಲು ರಾಜ್ಯವು ಈಗಾಗಲೇ ಡಿಜಿಟಲ್ ಎಕಾನಮಿ ಮಿಷನ್ ಸ್ಥಾಪನೆ ಮಾಡಿ ಕಾರ್ಯಪ್ರವೃತ್ತವಾಗಿದೆ. ತಂತ್ರಜ್ಞಾನದ ಮೂಲಕ ಆರ್ಥಿಕತೆಗೆ ವೇಗ ನೀಡುವುದು ಈ ಮಿಷನ್ ಉದ್ದೇಶವಾಗಿದೆ.

* ಡಿಜಿಟಲ್ ಎಕಾನಮಿ ಮಿಷನ್ ಮೂಲಕ ಇನ್‍ವೆಸ್ಟ್ ಇಂಡಿಯಾ ಮೂಲಕ ಜಾಗತಿಕ ಸಂಪರ್ಕಗಳನ್ನು ಕರ್ನಾಟಕದ ಜೊತೆ ಅನುಸಂಧಾನಗೊಳಿಸುತ್ತಿದ್ದು, ಈ ಉಪಕ್ರಮದಿಂದ ಕರ್ನಾಟಕದ ತಂತ್ರಜ್ಞಾನ ಉದ್ಯಮ ಮತ್ತು ರಾಜ್ಯದ ಬ್ರಾಂಡ್ ಈಕ್ವಿಟಿಯನ್ನು ಉತ್ತಮಗೊಳಿಸುತ್ತಿದೆ. ಈ ಮೂಲಕ ಮುಂದಿನ ಮೈಲುಗಲ್ಲು ಸಾಧಿಸಲಾಗುವುದು. ಇದಕ್ಕೆ ಪೂರಕವಾಗಿ ಹೊಸ ತಲೆಮಾರಿನ ನವೋದ್ಯಮ, ಐಟಿ ಬಿಟಿ ಜತೆಗೆ ಎಲೆಕ್ಟ್ರಾನಿಕ್ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.

* ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯ ಸರ್ಕಾರ ಅತ್ಯಂತ ದೂರದೃಷ್ಟಿಯುಳ್ಳ ಹಾಗೂ ಮುಂದಿನ ಐದು ವರ್ಷಗಳಲ್ಲಿ ಪರಿಣಾಮಕಾರಿ ಫಲಿತಾಂಶವನ್ನು ನೀಡಬಲ್ಲ ಐಟಿ ನೀತಿ-2020-25 ಅನ್ನು ರೂಪಿಸಿದ್ದು, ರಾಜ್ಯದ ಪ್ರತಿಮೂಲೆಗೂ ಅತ್ಯುತ್ತಮ ಕನೆಕ್ಟಿವಿಟಿ ಮಾಡಿ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಉಪಕ್ರಮಿಸಲಾಗಿದೆ. ಈಗಾಗಲೇ ಲಭ್ಯವಿರುವ 4ಜಿ ಸೇವೆಯ ಜತೆಗೆ, 5ಜಿ ಸೇವೆಯನ್ನೂ ಪ್ರತಿ ಮೂಲೆಗೂ ವಿಸ್ತರಿಸುವುದು, ಆ ಮೂಲಕ ಡಿಜಿಟಲ್ ಆರ್ಥಿಕತೆ ಗುರಿಗೆ ಶಕ್ತಿ ತುಂಬುವುದು ಸರ್ಕಾರದ ಉದ್ದೇಶವಾಗಿದೆ.

* ಬೆಂಗಳೂರಿಗೆ ಅದ್ಭುತವಾದ ತಂತ್ರಜ್ಞಾನ ಪಯಣದ ಟ್ರ್ಯಾಕ್ ಇದ್ದು, ಈ ವೇದಿಕೆಯ ಮೂಲಕ ಇಂದು ಮತ್ತೊಂದು ಪ್ರಮುಖ ಅಧ್ಯಾಯ ಆರಂಭಗೊಳ್ಳುತ್ತಿದೆ. ಸುಮಾರು 5500 ಡ್ರೈವಿಂಗ್ ಟೆಕ್ನಾಲಜಿ ಕಂಪನಿಗಳು ರಾಜ್ಯದಲ್ಲಿದ್ದು, ಅವೆಲ್ಲವೂ ಜಾಗತಿಕ ಮಟ್ಟಕ್ಕೆ ಸರಿಸಾಟಿಯಾಗಿ ಕೆಲಸ ಮಾಡುತ್ತಿವೆ.

* ಕೋವಿಡ್ ಸಮಯದಲ್ಲಿ ತಂತ್ರಜ್ಞಾನ ಬಳಸಿಕೊಂಡು ರಾಜ್ಯದಲ್ಲಿ ಆಡಳಿತ ನಡೆಸಲಾಗಿದೆ. ಅಂತಹ ವಿಪರೀತ ಸಂರ್ಭದಲ್ಲೂ ರಾಜ್ಯ ಸರ್ಕಾರವು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಹೀಗಾಗಿ ಐಟಿ ಬಿಟಿ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಸುಧಾರಣೆ ತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ.

* ಪ್ರಧಾನಿ ಮೋದಿ ಅವರ ಕನಸುಗಳನ್ನು ಕರ್ನಾಟಕ ನನಸು ಮಾಡುತ್ತಿದೆ. ಅವರ ಕನಸು ಆತ್ಮನಿರ್ಭರ ಕಲ್ಪನೆಯೊಂದಿಗೆ ಕರ್ನಾಟಕವನ್ನು ನಿರ್ಮಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬೆಂಗಳೂರು ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಪ್ರಭಾವಶಾಲಿಯಾಗಿ ಬೆಳೆಯಲಿದೆ ಎಂಬ ವಿಶ್ವಾಸ ನನ್ನದು ಎಂದು ಡಿಸಿಎಂ ತಿಳಿಸಿದರು.

* ತಂತ್ರಜ್ಞಾನ ಕ್ಷೇತ್ರವೇ ಮುಂದಿನ ದಿನಗಳಲ್ಲಿ ತನ್ನ ಅಧಿಪತ್ಯವನ್ನು ಸಾಧಿಸಲಿದೆ. ಅದಕ್ಕೆ ಡಿಜಿಟಲ್ ಇಂಡಿಯಾ, ಡಿಜಿಟಲ್ ಎಕಾನಮಿ ಉಪ ಕ್ರಮಗಳು ಬಲ ತುಂಬುತ್ತಿವೆ. ಭವಿಷ್ಯದಲ್ಲಿ ತಂತ್ರಜ್ಞಾನವೇ ಆಡಳಿತ ನಡೆಸಲಿದೆ. ಆ ನಿಟ್ಟಿನಲ್ಲಿ ಭಾರತದ ಜತೆ ಕರ್ನಾಟಕವೂ ದಾಪುಗಾಲು ಇಡುತ್ತಿದೆ.

Click to comment

Leave a Reply

Your email address will not be published. Required fields are marked *