Connect with us

Latest

ಸುಪ್ರೀಂ ತೀರ್ಪಿನ ಬಳಿಕ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ನಿರ್ಧಾರ: ಮೋದಿ

Published

on

– ಕಾಂಗ್ರೆಸ್ ಚಿಂತನೆಯೇ ಒಂದು, ಸಂಸ್ಕೃತಿಯೇ ಒಂದು
– ವರ್ಷದ ಮೊದಲ ದಿನವೇ ಮಾಧ್ಯಮಕ್ಕೆ ಸಂದರ್ಶನ
– ಸಾಲಮನ್ನಾ ರಾಜಕೀಯ ನಾಟಕ
– ಉರ್ಜಿತ್ ಪಟೇಲ್ 7-8 ತಿಂಗಳ ಮೊದಲೇ ರಾಜೀನಾಮೆ ನೀಡಿದ್ರು

ನವದೆಹಲಿ: ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ, ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಟೀಕೆಗೆ ಗುರಿಯಾಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಹೊಸ ವರ್ಷದ ಮೊದಲ ದಿನವೇ ಸಂದರ್ಶನ ನೀಡಿ ಸುದ್ದಿಯಾಗಿದ್ದಾರೆ. ತಮ್ಮ ಸಂದರ್ಶನಲ್ಲಿ ಕಾಂಗ್ರೆಸ್ ಸೇರಿದಂತೆ ಮಿತ್ರಪಕ್ಷಗಳ ಧೋರಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹೊಸ ವರ್ಷದಂದೆ ಎಎನ್‍ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡುವ ಮೂಲಕ ಲೋಕಸಭಾ ಚುನಾವಣೆಗೆ ವೇದಿಕೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ.

95 ನಿಮಿಷದ ಸಂದರ್ಶನದಲ್ಲಿ ಮೋದಿ ಹೇಳಿದ ಪ್ರಮುಖ ವಿಚಾರಗಳು ಇಲ್ಲಿದೆ

1. ಕಾಂಗ್ರೆಸ್ ವಿರುದ್ಧ ಟೀಕೆ:
ದೇಶದ ಮೊದಲ ಕುಟುಂಬ ಎಂದು ಕರೆದುಕೊಂಡಿದ್ದ ಕುಟುಂಬ ಸದಸ್ಯರು ಇಂದು ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಮೇಲೆ ಆರ್ಥಿಕ ಅಪರಾಧದ ಪ್ರಕರಣಗಳು ದಾಖಲಾಗಿದೆ. ಆದರೆ ಅವರಿಗೆ ಬೆಂಬಲವಾಗಿರುವ ಕೆಲವರು ಅದನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಸಂಸ್ಕೃತಿಯನ್ನು ತೊಲಗಿಸುವುದು ನಮ್ಮ ಗುರಿಯಾಗಿದ್ದು, ಇದಕ್ಕಾಗಿಯೇ ಕಾರ್ಯನಿರ್ವಸುತ್ತಿದ್ದೇವೆ. ದೇಶದಲ್ಲಿ ಕಾಂಗ್ರೆಸ್ ಸಂಸ್ಕೃತಿ ಇಲ್ಲವಾಗಿಸುವುದೇ ನಮ್ಮ ಉದ್ದೇಶ. ಕಾಂಗ್ರೆಸ್ ಚಿಂತನೆಯೇ ಒಂದು, ಸಂಸ್ಕೃತಿಯೇ ಒಂದು ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಎಂಬುವುದಕ್ಕೆ ಹೊಸ ಅರ್ಥ ನೀಡಿದರು.

2. ಅಯೋಧ್ಯೆ ರಾಮಮಂದಿರ:
ಸುಪ್ರೀಂ ಕೋರ್ಟ್ ಅಯೋಧ್ಯೆ ಕುರಿತು ತೀರ್ಪು ನೀಡಿದ ಬಳಿಕ ಸರ್ಕಾರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ನ್ಯಾಯಾಲಯದಲ್ಲಿ ರಾಮಮಂದಿರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವಿಳಂಬವಾಗಲು ಕಾಂಗ್ರೆಸ್ ವಕೀಲರು ಕಾರಣ. ರಾಮಮಂದಿರ ಬಿಜೆಪಿ ಭಾವಾತ್ಮಕ ವಿಚಾರವಾಗಿದ್ದು ಅದನ್ನು ನಾವು ನಿರ್ಲಕ್ಷ್ಯ ವಹಿಸಿಲ್ಲ. ರಾಮಮಂದಿರವನ್ನು ಸಂವಿಧಾನದ ವ್ಯಾಪ್ತಿಯಲ್ಲಿ ಇತ್ಯರ್ಥ ಪಡಿಸುವುದಾಗಿ ಬಿಜೆಪಿ ಪ್ರಾಣಾಳಿಕೆಯಲ್ಲಿ ತಿಳಿಸಿದೆ. ಹೀಗಾಗಿ ನಾವು ನ್ಯಾಯಾಂಗದಲ್ಲಿ ನಂಬಿಕೆ ಇಟ್ಟಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರವಷ್ಟೇ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಯನ್ನು ಹೊರಡಿಸುವ ನಿರ್ಧಾರವನ್ನು ಕೈಗೊಳ್ಳಲಾಗುವುದು.

3. ಪಂಚರಾಜ್ಯಗಳ ಚುನಾವಣೆ:
ಪಂಚರಾಜ್ಯ ಚುನಾವಣೆಗಳು ಇಬ್ಬರ ಮೇಲೆ ಮಾತ್ರ ನಡೆದಿಲ್ಲ. ಬಿಜೆಪಿ ವಿಶ್ವದ ಅತೀ ದೊಡ್ಡ ಪಕ್ಷವಾಗಿದ್ದು, ಕಾರ್ಯಕರ್ತರ ಪಕ್ಷವಾಗಿದೆ. ಛತ್ತೀಸ್‍ಗಢದಲ್ಲಿ ಆಡಳಿತ ವಿರೋಧ ಅಲೆ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. 15 ವರ್ಷಗಳ ಆಡಳಿತ ವಿರೋಧಿ ಅಲೆಯೇ ನಮ್ಮ ಸೋಲಿಗೆ ಕಾರಣವಾಗಿದೆ. ಆದ್ದರಿಂದ ನಾವು ಆಡಳಿತ ವಿರೋಧಿ ಅಲೆ ವಿರುದ್ಧ ಹೋರಾಟ ನಡೆಸಿದ್ದೇವೆ. ಇನ್ನುಳಿದ ಎರಡು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆಗಿದೆ. 2019 ಲೋಕಸಭಾ ಚುನಾವಣೆ ಜನತಾ ಹಾಗೂ ಮಹಾಘಟಬಂಧನ್ ನಡುವೆ ನಡೆಯುತ್ತದೆ.

4. ಸಾಲಮನ್ನಾ ರಾಜಕೀಯ ನಾಟಕ:
ಸಾಲಮನ್ನಾ ರಾಜಕೀಯ ನಾಟಕವಾಗಿದ್ದು, ರೈತರು ಹೆಚ್ಚು ಖಾಸಗಿ ಸಾಲ ಪಡೆಯುತ್ತಾರೆ. ಕಾಂಗ್ರೆಸ್ ಪಕ್ಷ ಎಲ್ಲಾ ರೈತರ ಸಾಲಮನ್ನಾ ಮಾಡಿಲ್ಲ. ಕೇವಲ ಸುಳ್ಳನ್ನೇ ಪ್ರಚಾರ ಮಾಡುತ್ತಿದ್ದಾರೆ. ರೈತರಿಗೆ ನೀರು, ಉತ್ತಮ ಮಾರುಕಟ್ಟೆ, ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುವಂತೆ ಮಾಡಿ ಸಮಗ್ರ ಅಭಿವೃದ್ಧಿ ಆಗುವಂತೆ ಮಾಡುವತ್ತ ನಮ್ಮ ಕಾರ್ಯ ಮುಂದುವರಿದಿದೆ. ದೇಶದ ಸಂಚಾರ ವ್ಯವಸ್ಥೆಯಲ್ಲಿ ಹೊಸ ನಾಂದಿ ಹಾಡಿದ್ದೇವೆ. ಇದರಿಂದ ಉತ್ಪನ್ನಗಳ ಲಭ್ಯತೆಯ ವೇಗ ಹೆಚ್ಚಾಗುತ್ತದೆ. ರೈತರು ಸಾಲವೇ ಪಡೆಯದಂತೆ ಮಾಡುವುದು ನಮ್ಮ ಕಾರ್ಯದ ಉದ್ದೇಶ ಎಂದರು.

5. ಆರ್ಥಿಕ ಅಪರಾಧಿಗಳು ಭಾರತಕ್ಕೆ ವಾಪಸ್:
ದೇಶ ಬಿಟ್ಟು ತೆರಳಿದ ಎಲ್ಲಾ ಆರ್ಥಿಕ ಅಪರಾಧಿಗಳನ್ನು ವಾಪಸ್ ಕರೆತರಲಾಗುವುದು. ಈ ಸಂಬಂಧ ಕಾನೂನು ಪ್ರಕ್ರಿಯೆ ಮತ್ತು ರಾಜತಾಂತ್ರಿಕ ಪ್ರಕ್ರಿಯೆಗಳು ನಡೆಯುತ್ತಿದೆ. ಈಗಾಗಲೇ ತನಿಖಾ ಸಂಸ್ಥೆಗಳು ಅಕ್ರಮ ಎಸಗಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ. ಇಂದು ಬಾರದೇ ಇದ್ದರೂ ನಾಳೆ ಎಲ್ಲ ಆರ್ಥಿಕ ಅಪರಾಧಿಗಳನ್ನು ಕರೆತರಲಾಗುವುದು.

ಭ್ರಷ್ಟಚಾರದ ವಿರುದ್ಧ ಬಿಜೆಪಿಯ ಹೋರಾಟ ಮುಂದುವರೆಯುತ್ತದೆ. ಜಿಎಸ್‍ಟಿ ತೆರಿಗೆ ವ್ಯವಸ್ಥೆಯನ್ನು ಸರಳಿಕೃತಗೊಳಿಸಿದೆ. ತೆರಿಗೆ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಿದೆ. ದೇಶದ ಮಧ್ಯಮ ವರ್ಗದ ಆಕಾಂಕ್ಷೆಗಳಿಗೆ ನಾವು ಈ ಮೂಲಕ ರೆಕ್ಕೆಗಳನ್ನು ನೀಡಿದ್ದೇವೆ. ಸರ್ಕಾರದ ಹೆಚ್ಚಿನ ಯೋಜನೆಗಳು ಮಧ್ಯಮ ವರ್ಗದ ಜನಕ್ಕೆ ಹೆಚ್ಚು ಲಾಭ ನೀಡಿದೆ.

6. ತ್ರಿವಳಿ ತಲಾಖ್:
ಹಲವು ಮುಸ್ಲಿಮ್ ರಾಷ್ಟ್ರಗಳು ತ್ರಿವಳಿ ತಲಾಖ್ ನಿಷೇಧಿಸಿವೆ. ಪಾಕಿಸ್ತಾನದಲ್ಲೂ ತಲಾಖ್ ನಿಷೇಧಗೊಂಡಿದೆ. ಇಲ್ಲಿ ಪ್ರಮುಖವಾಗಿ ಇರುವಂತಹದ್ದು ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯ. ಇದರಲ್ಲಿ ಧಾರ್ಮಿಕ ನಂಬಿಕೆ ವಿಚಾರ ಬರುವುದಿಲ್ಲ. ಹೀಗಾಗಿ ಈ ವಿಚಾರವನ್ನು ಪ್ರತ್ಯೇಕವಾಗಿ ನೋಡಬೇಕು.

7. ಶಬರಿಮಲೆ ವಿವಾದ:
ಕೆಲವೊಂದು ದೇವಾಲಯಗಳು ತನ್ನದೇ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ಕೆಲವು ದೇವಾಲಯಗಳಲ್ಲಿ ಪುರುಷರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಶಬರಿಮಲೆ ಪ್ರಕರಣ ಬಂದಾಗ ಮಹಿಳಾ ನ್ಯಾಯಾಧೀಶರು ಕೆಲವು ಅಭಿಪ್ರಾಯವನ್ನು ವ್ಯಕ್ತಪಡಿಸಿ ಸಲಹೆಯನ್ನು ನೀಡಿದ್ದಾರೆ. ಹೀಗಾಗಿ ಈ ವಿಚಾರ ಚರ್ಚೆಯಾಗಬೇಕು.

8. ನೋಟು ನಿಷೇಧ:
2016ರಲ್ಲಿ ನಮ್ಮ ಸರ್ಕಾರ ನೀಡಿದ ಶಾಕ್ ಎನ್ನುವ ಆರೋಪವನ್ನು ತಿರಸ್ಕರಿಸಿದ ಅವರು, ಇದು ಪೂರ್ವನಿರ್ಧಾರದಂತೆ ಹೇಳುವ ಜಾತಕವಲ್ಲ. ನಾವು ಎರಡು ವರ್ಷದ ಹಿಂದೆ ಜನರಿಗೆ ಎಚ್ಚರಿಕೆ ನೀಡುತ್ತಾ ಬಂದಿದ್ದೇವೆ. ಕಪ್ಪು ಹಣ ಇರುವ ಮಂದಿಗೆ ದಂಡವನ್ನು ಪಾವತಿಸಿ ಠೇವಣಿ ಇಡುವಂತೆ ಹೇಳಿದ್ದೇವು. ಹೀಗಾಗಿ ಹಲವು ಮಂದಿ ಸ್ವಯಂಪ್ರೇರಿತವಾಗಿ ದಂಡವನ್ನು ಪಾವತಿಸಿದ್ದಾರೆ.

9. ಉರ್ಜಿತ್ ಪಟೇಲ್ ರಾಜೀನಾಮೆ:
ಆರ್‌ಬಿಐ ಗವರ್ನರ್ ಅಗಿದ್ದ ಉರ್ಜಿತ್ ಪಟೇಲ್ ತನ್ನ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮೊದಲೇ ಹೇಳಿದ್ದರು. ಮೊದಲ ಬಾರಿಗೆ ಈ ವಿಚಾರವನ್ನು ನಾನು ಈಗ ಹೇಳುತ್ತಿದ್ದು, 7 -8 ತಿಂಗಳ ಹಿಂದೆಯೇ ಅವರು ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಾ ಬಂದಿದ್ದರು. ಅಷ್ಟೇ ಅಲ್ಲದೇ ಬರಹದಲ್ಲೇ ರಾಜೀನಾಮೆಯನ್ನು ನೀಡಿದ್ದರು. ಇದರಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ. ಆರ್‌ಬಿಐ ಗವರ್ನರ್ ಆಗಿ ಉರ್ಜಿತ್ ಪಟೇಲ್ ಉತ್ತಮ ನಿರ್ವಹಣೆ ಮಾಡಿದ್ದಾರೆ.

10. ಸರ್ಜಿಕಲ್ ಸ್ಟ್ರೈಕ್:
ಪಾಕಿಸ್ತಾನದ ವಿರುದ್ಧ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಉರಿ ದಾಳಿಗೆ ತಿರುಗೇಟು ನೀಡಲು ನಡೆಸಿದ್ದು, ಈ ವೇಳೆ ಭಾರತೀಯ ಯೋಧರಿಗೆ ಬೆಳಗಾಗುವ ಮುನ್ನ ವಾಪಸ್ ಬನ್ನಿ ಎಂದು ಮಾತ್ರ ತಿಳಿಸಿದ್ದೆ. ಕಾರ್ಯಾಚರಣೆ ಯಶಸ್ವಿಯಾದರೂ, ವಿಫಲವಾದರೂ ದೇಶದ ಸೈನಿಕರಿಗೆ ಆಪಾಯ ಆಗಬಾರದು ಎಂಬುದು ನನ್ನ ಉದ್ದೇಶವಾಗಿತ್ತು. ಅಂದು ನಾನು ಇಡೀ ರಾತ್ರಿ ಪ್ರತಿ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದೆ. ಬೆಳಗಾಗಿ 1 ಗಂಟೆಯಾದ ಬಳಿಕ ಸೈನ್ಯದಿಂದ ಸಂದೇಶ ಬಂತು. ಆ ವೇಳೆಗೆ ಎಲ್ಲಾ ಸೈನಿಕರು ಕ್ಯಾಪ್ ಸೇರಿದ್ದರು. ಬಳಿಕವೇ ನನಗೆ ಸಮಾಧಾನ ಆಗಿತ್ತು. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ದೇಶದ ಜನತೆಗೆ ತಿಳಿಸುವ ಮೊದಲೇ ಪಾಕಿಸ್ತಾನಕ್ಕೆ ತಿಳಿಸಿದ್ದೇವು. ಆದರೆ ಈ ಬಗ್ಗೆ ದೇಶದ ಕೆಲ ಜನ ಸಂದೇಹ ವ್ಯಕ್ತಪಡಿಸಿದ್ದು ದುರಾದೃಷ್ಟಕರ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv