Saturday, 20th July 2019

ರಾಜಕೀಯ ನಾಟಕದ ಮುಂದಿನ ದೃಶ್ಯ ಏನು – ಇಂದಿನ ಸಿಎಲ್‍ಪಿ ಸಭೆಯಲ್ಲಿ ಸಿಗಲಿದೆ ಉತ್ತರ

ಬೆಂಗಳೂರು: ಸದ್ಯ ಕರ್ನಾಟಕದಲ್ಲಿ ನಿರಂತರ ಪ್ರದರ್ಶನ ಕಾಣುತ್ತಿರುವ ರಾಜಕೀಯ ನಾಟಕದ ಮುಂದಿನ ದೃಶ್ಯಗಳೇನು ಎನ್ನುವ ಪ್ರಶ್ನೆಗೆ ಇವತ್ತು ಖಚಿತ ಉತ್ತರ ಸಿಗಲಿದೆ.

ಅಧಿಕಾರದ ಹಪಾಹಪಿಯಲ್ಲಿ ಗೆದ್ದು ಬಂದಿರುವ ಪಕ್ಷಕ್ಕೆ ಕೈ ಕೊಟ್ಟು ಬಿಜೆಪಿಗೆ ಜಿಗಿಯಲು ಸಿದ್ಧರಾಗಿರುವ ಕಾಂಗ್ರೆಸ್ ಶಾಸಕರ ನಿರ್ಧಾರ ಏನು ಎನ್ನುವುದು ಇವತ್ತೇ ಸ್ಪಷ್ಟವಾಗಲಿದೆ. ಸಮನ್ವಯ ಸಮಿತಿ ಮುಖ್ಯಸ್ಥರೂ ಆಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮಧ್ಯಾಹ್ನ 3.30ಕ್ಕೆ ವಿಧಾನಸೌಧದಲ್ಲಿ ಶಾಸಕರ ಸಭೆ ನಡೆಯಲಿದೆ.

ವಿಧಾನಸೌಧದಲ್ಲಿ ನಡೆಯಲಿರುವ ಸಭೆಗೆ ಎಲ್ಲಾ ಶಾಸಕರು ಹಾಜರಿರುವುದು ಕಡ್ಡಾಯ. ಇಲ್ಲವಾದಲ್ಲಿ ಅಂತಹ ಶಾಸಕರು ಸ್ವಯಂ ಪ್ರೇರಿತರಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಬಿಡಲು ಇಚ್ಛಿಸಿದ್ದಾರೆಂದು ಭಾವಿಸಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಕಾಂಗ್ರೆಸ್ ನೀಡಿದೆ.

ಸಚಿವ ಸ್ಥಾನ ಕಳೆದುಕೊಂಡಿರುವ ಗೋಕಾಕ್ ಶಾಸಕ, ಸಚಿವ ಸ್ಥಾನ ಸಿಗದ ಸಿಟ್ಟಲ್ಲಿ ಮುನಿಸಿಕೊಂಡಿರುವ ಚಿಂಚೋಳಿ ಶಾಸಕ ಉಮೇಶ್ ಜಾಧವ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರು ಸದ್ಯಕ್ಕೆ ಕಾಂಗ್ರೆಸ್ ನಾಯಕರ ಕೈಗೆ ಸಿಕ್ಕಿಲ್ಲ. ಇವತ್ತಿನ ಸಭೆಗೆ ಇವರೆಲ್ಲ ಹಾಜರಾಗ್ತಾರಾ? ಅಥವಾ ಕೈಕಮಾಂಡ್‍ನ ಎಚ್ಚರಿಕೆಯನ್ನೂ ಧಿಕ್ಕರಿಸಿ ನಮ್ಮ ದಾರಿ ನಮಗೆ ಅಂತ ಬಹಿರಂಗ ಕಹಳೆ ಮೊಳಗಿಸ್ತಾರಾ ಎನ್ನುವುದು ಇವತ್ತು ಸ್ಪಷ್ಟವಾಗಲಿದೆ.

ನಾಪತ್ತೆಯಾಗಿದ್ದ ಕಂಪ್ಲಿ ಶಾಸಕ ಗಣೇಶ್ ಮತ್ತು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ತಾವೂ ಬಂಡಾಯ ಬಣದಲ್ಲಿ ಇಲ್ಲ ಎಂದು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಬಂಡಾಯ ಶಾಸಕರು ಏನು ಹೇಳಬಹುದು?
– ಅಪರೇಷನ್ ಕಮಲಕ್ಕೆ ಶಾಸಕರು ಮರುಳಾಗಲು ಕಾಂಗ್ರೆಸ್ ನಾಯಕರ ವರ್ತನೆಯೇ ಕಾರಣ
– ಅತೀ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಇದ್ದರೂ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರ ಮಾತಿಗೆ ಬೆಲೆಯೇ ಇಲ್ಲ
– ಕ್ಷೇತ್ರಗಳಿಗೆ ಅನುದಾನ, ವರ್ಗಾವಣೆ ವಿಷ್ಯದಲ್ಲಿ ಸರ್ಕಾರ ಕಾಂಗ್ರೆಸ್ ಶಾಸಕರ ಮಾತು ಕೇಳುತ್ತಿಲ್ಲ
– ಈ ಬಗ್ಗೆ ನಾಯಕರಿಗೆ ಎಷ್ಟೇ ದೂರು ಕೊಟ್ಟರೂ ಇದುವರೆಗೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ
– ಸಂಪುಟ ವಿಸ್ತರಣೆ ವೇಳೆ ಕೈ ತಪ್ಪಿದ ಮಂತ್ರಿಗಿರಿ, ನಿಗಮ – ಮಂಡಳಿಗಳಿಗೆ ಅಧ್ಯಕ್ಷರ ನೇಮಕದಲ್ಲಿ ಅನ್ಯಾಯದ ಕೂಗು

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *