ಏನ್ರೀ, ಅವ್ರನ್ನ ಕರೆದುಕೊಂಡು ಹೋಗೋದಕ್ಕೆ ತೀರ್ಮಾನ ಮಾಡಿದ್ದೀರಾ: ಈಶ್ವರಪ್ಪ ಕಾಲೆಳೆದ ಡಿಕೆಶಿ

– ನೀರಾವರಿ ಸಭೆಯಲ್ಲೂ ಆಪರೇಷನ್ ಕಮಲದ್ದೇ ಮಾತು

ಬೆಂಗಳೂರು: ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ನಡೆದ ನೀರಾವರಿ ಸಭೆಯಲ್ಲಿಯೂ ಆಪರೇಷನ್ ಕಮಲದ ವಿಚಾರವಾಗಿ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರನ್ನು ಕಾಲೆಳೆದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಹಾಸ್ಯ ಹರಿಸಿದ್ದಾರೆ.

ಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಒಂದಾಗಿ ಕುಳಿತಿದ್ದರು. ಎಚ್.ಕೆ.ಪಾಟೀಲ್, ಕೆ.ಎಸ್.ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಎಂ.ಬಿ.ಪಾಟೀಲ್ ಸಾಲಾಗಿ ಕುಳಿತು ಮಾತುಕತೆಯಲ್ಲಿ ತೊಡಗಿದ್ದರು. ಇದನ್ನು ಗಮನಿಸಿದ ಸಚಿವ ಡಿ.ಕೆ.ಶಿವಕುಮಾರ್ ಅವರು, “ಅವರನ್ನ ಕರೆದುಕೊಂಡು ಹೋಗುವುದಕ್ಕೆ ತೀರ್ಮಾನ ಮಾಡಿದ್ದೀರಾ” ಎಂದು ಕೆ.ಎಸ್.ಈಶ್ವರಪ್ಪ ಅವರಿಗೆ ಹೇಳುತ್ತಲೇ, “ನಿಮ್ಮ ಮೇಲೆ ಕಣ್ಣು ಹಾಕಿದ್ದಾರೆ” ಅಂತ ಎಚ್.ಕೆ.ಪಾಟೀಲ್ ಅವರಿಗೆ ತಿಳಿಸಿ ಕಾಲೆಳೆದರು.


ತಕ್ಷಣವೇ ಡಿ.ಕೆ.ಶಿವಕುಮಾರ್ ಅವರಿಗೆ ಉತ್ತರ ಕೊಟ್ಟ ಈಶ್ವರಪ್ಪ ಅವರು,”ಒಂದು ಪರ್ಸೇಂಟ್ ಆದ್ರೂ ಯಶಸ್ವಿ ಆಗುತ್ತೆ ಅಂತ ನಿನಗೆ ಆದ್ರು ನಂಬಿಕೆ ಇದೆಯೇನಪ್ಪಾ” ಎಂದು ಪ್ರಶ್ನೆದರು. ಈ ವೇಳೆ ಸಿಎಂ ಕುಮಾರಸ್ವಾಮಿ ಅವರನ್ನು ನೋಡಿದ ಈಶ್ವರಪ್ಪ ನಗುತ್ತಲೇ ಕೈಮುಗಿದರು. ಇದಕ್ಕೆ ಕೂಡಲೇ ಡಿಕೆಶಿ, “ಎಚ್.ಕೆ. ಪಾಟೀಲ್ ಅವರನ್ನಾದರೂ ಕರೆದುಕೊಂಡು ಹೋಗಬಹುದು ಅಂತ ನಂಬಬಹುದು. ಆದರೆ ಎಂ.ಬಿ.ಪಾಟೀಲ್ ಅವರನ್ನು ಕರೆದುಕೊಂಡು ಹೋಗಲು ಸಾಧ್ಯವೇ” ಎಂದು ಪ್ರಶ್ನಿಸಿದ ಸಚಿವರು  ಹಾಸ್ಯ ಮಾಡಿದರು.

ಇತ್ತ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹಾಗೂ ಸಿದ್ದರಾಮಯ್ಯ ಅವರ ಮಾತುಕತೆ ಜೋರಾಗಿಯೇ ಇತ್ತು. ನಗುತ್ತಲೇ ಇಬ್ಬರು ಚರ್ಚೆಯಲ್ಲಿ ತೊಡಗಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರು ರಾಜಕೀಯ ಟೀಕಾಪ್ರಹಾರ ಪಕ್ಕಕ್ಕೆ ಸರಿಸಿ ಸಭೆಯಲ್ಲಿ ಭಾಗವಹಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *