Tuesday, 22nd October 2019

ದಿಢೀರ್ ಆತುರ, ಆವೇಗ – ಶಾಸಕರ ಅವಸರದ ರಾಜೀನಾಮೆಯಿಂದ ಸರ್ಕಾರ ಬೀಳಿಸುವ ಯತ್ನ ನಿಧಾನ

ಬೆಂಗಳೂರು: ದೋಸ್ತಿ ಸರ್ಕಾರವನ್ನು ಬೀಳಿಸಿಯೇ ಬಿಡುವ ಬಿಜೆಪಿ ಪ್ರಾಯೋಜಿತ ಆಪರೇಷನ್ ಕಮಲ ಇದಕ್ಕಿದ್ದಂತೆ ಮತ್ತೆ ಜೀವ ಪಡಿಯಿತ್ತಾದ್ರೂ ಡಿಢೀರ್ ಆಗಿ ಮತ್ತೆ ನಿಧಾನಗತಿಗೆ ಇಳಿದಿದೆ.

ಸೋಮವಾರ ಇಬ್ಬರು ಶಾಸಕರು ರಾಜೀನಾಮೆ ಕೊಟ್ಟ ಆತುರ, ಆವೇಗವನ್ನು ನೋಡಿದರೆ ಮೈತ್ರಿಕೂಟದ ಇನ್ನಷ್ಟು ಶಾಸಕರು ಇಷ್ಟೊತ್ತಿಗೆ ಗುಡ್‍ಬೈ ಹೇಳಿ ಸರ್ಕಾರ ಬಹುತೇಕ ಬೀಳುವ ಸ್ಥಿತಿಯಲ್ಲಿರಬೇಕಿತ್ತು. ಆದರೆ ಅದ್ಯಾವುದೂ ಆಗಿಲ್ಲ.

ಅಮಾವಾಸ್ಯೆ, ಗ್ರಹಣ ಒಂದೆಡೆಯಾದ್ರೆ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ತೆಗೆದುಕೊಂಡ ಅವಸರದ ನಿರ್ಧಾರ ಸದ್ಯಕ್ಕಂತು ಬಿಜೆಪಿ ಲೆಕ್ಕವನ್ನೇ ಹಳಿ ತಪ್ಪಿಸಿದೆ. ಮೂಲಗಳ ಪ್ರಕಾರ ಬುಧವಾರವೇ ಮೂವರು ಶಾಸಕರು ರಾಜೀನಾಮೆ ಕೊಡಬೇಕಿತ್ತಾದ್ರೂ ಅವರು ಇನ್ನೂ ರಾಜೀನಾಮೆ ಕೊಟ್ಟಿಲ್ಲ.

ದಿಢೀರ್ ಬ್ರೇಕ್ ಬಿದ್ದಿದ್ಯಾಕೆ?
ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿದ್ದು ಬೇರೆ ಅತೃಪ್ತರಿಗೆ ಅಸಮಾಧಾನ ಉಂಟಾಗಿದೆ. ಆನಂದ್ ಸಿಂಗ್ ಪ್ಲ್ಯಾನ್ ಬಗ್ಗೆ ಮಾಹಿತಿ ಇಲ್ಲದೆ ಉಳಿದ ಅತೃಪ್ತರು ಪರದಾಡಿದ್ದು, ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ನಾಯಕರಿಗೂ ಅಚ್ಚರಿಯುಂಟಾಗಿದೆ.

ಆನಂದ್ ಸಿಂಗ್ ರಾಜೀನಾಮೆ ತಿಳಿಯುತ್ತಿದ್ದಂತೆ ದುಡುಕಿದ ರಮೇಶ್ ಜಾರಕಿಹೊಳಿ ಅವರು ಸ್ಪೀಕರ್‍ಗೆ ರಾಜೀನಾಮೆ ಪತ್ರ ಸಲ್ಲಿಸದೆ ಮಾಧ್ಯಮಗಳಿಗೆ ರಾಜೀನಾಮೆ ಪತ್ರ ಬಿಡುಗಡೆ ಮಾಡಿದ್ದರು. ಆ ಬಳಿಕ ದುಡುಕಿದ್ದರ ಬಗ್ಗೆ ಸಹೋದರ ಕ್ಲಾಸ್ ತೆಗೆದುಕೊಂಡಿದ್ದರು. ಹೀಗಾಗಿ ಆ ಬಳಿಕ ರಮೇಶ್ ಸೈಲೆಂಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ಆನಂದ್ ಸಿಂಗ್ ರಾಜೀನಾಮೆ ನಂತರ ಅಮಾವಾಸ್ಯೆ ಅಡ್ಡಿಯ ನೆಪದಲ್ಲಿ ಅತೃಪ್ತ ಶಾಸಕರು ಯಾರು ಮೊದಲು ಯಾರು ನಂತರ ಅನ್ನೋ ಗೊಂದಲದಲ್ಲಿದ್ದಾರೆ. ಅತೃಪ್ತ ಶಾಸಕರಲ್ಲೇ ಬಂಡಾಯದ ಗುದ್ದಾಟ, ರಾಜೀನಾಮೆ ಡ್ರಾಮಾಗೆ ಅಲ್ಪ ವಿರಾಮ ಬಿದ್ದಿದೆ. ಅತೃಪ್ತ ಶಾಸಕರಲ್ಲೇ ಗೊಂದಲದಿಂದ ಬಿಜೆಪಿ ನಾಯಕರಲ್ಲೂ ಗೊಂದಲವುಂಟಾಗಿದ್ದು, ಬಂಡಾಯ ಶಾಸಕರ ಮಧ್ಯೆ ಒಮ್ಮತ ಮೂಡಿಸಲು ಬಿಜೆಪಿ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ.

ಇತ್ತ ಅತೃಪ್ತರ ಫೈರ್ ಬ್ರ್ಯಾಂಡ್ ನಾಗೇಂದ್ರ ಈಗ ಉಲ್ಟಾ ಹೊಡೆದಿದ್ದಾರೆ. ಬಂಡಾಯದ ಫೈರ್ ಬ್ರ್ಯಾಂಡ್‍ಗಳಾದ ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ನಾಗೇಂದ್ರ ಮೂರು ದಿಕ್ಕಿನತ್ತ ಮುಖಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Leave a Reply

Your email address will not be published. Required fields are marked *