Recent News

ಪಕ್ಷದ ಐವರು ರಾಜೀನಾಮೆ ನೀಡಿದರೆ, ಬಿಜೆಪಿಯ 5 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ತಿಮ್ಮಾಪುರ

ಬಾಗಲಕೋಟೆ: ಕಾಂಗ್ರೆಸ್ಸಿನ ಐವರು ರಾಜೀನಾಮೆ ನೀಡಿದರೆ, ಬಿಜೆಪಿಯ ಐದು ಶಾಸಕರು ನಮ್ಮ ಜೊತೆ ಬರಲು ಸಿದ್ಧರಿದ್ದಾರೆ. ಸ್ವತಃ ನನ್ನ ಜೊತೆ ಇಬ್ಬರು ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ಹೊಸ ಬಾಂಬ್ ಸಿಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿ, ನಾವು ಸಹ ರಿವರ್ಸ್ ಆಪರೇಶನ್ ಮಾಡುತ್ತೇವೆ. ಈಗಾಗಲೇ ಬಿಜೆಪಿಯ ಐವರು ಶಾಸಕರ ಜೊತೆ ಮಾತುಕತೆ ನಡೆದಿದೆ. ಬಿಜೆಪಿಯ ಐವರು ಬರಲು ಸಿದ್ಧರಿದ್ದಾರೆ. ಐವರು ಶಾಸಕರ ಪೈಕಿ ಸದ್ಯ ನನ್ನ ಜೊತೆಗೆ ಇಬ್ಬರು ಶಾಸಕರು ಸಂಪರ್ಕದಲ್ಲಿದ್ದಾರೆ. ಇನ್ನು ಆದಾಯ ತೆರಿಗೆ(ಐಟಿ), ಜಾರಿ ನಿರ್ದೇಶನಾಲಯ(ಇಡಿ) ಬೆದರಿಕೆಯಿಂದ ಶಾಸಕರು ರಾಜೀನಾಮೆಗೆ ಮುಂದಾಗಿದ್ದು, ಕೇಂದ್ರ ಸರ್ಕಾರ ಐಟಿ, ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.

ದೇಶದೆಲ್ಲೆಡೆ ಇದೇ ರೀತಿ ನಡೆಯುತ್ತಿದ್ದು, ಶಾಸಕರ ರಾಜೀನಾಮೆಯ ಹಿಂದೆ ಬೆದರಿಕೆ ತಂತ್ರವಿದೆ. ಕೆಲವು ಕೈಗಾರಿಕೋದ್ಯಮಿಗಳಿಗೂ ಬೆದರಿಕೆ ಇದೆ. ಶಾಸಕ ರಮೇಶ ಜಾರಕಿಹೊಳಿ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ. ರಮೇಶ ಜಾರಕಿಹೊಳಿ ನಮ್ಮ ಜೊತೆಗೆ ಇದ್ದಾರೆ. ಸರ್ಕಾರ ಸುಭದ್ರವಾಗಿದೆ. ಒಂದು ವೇಳೆ ನಮ್ಮ ಕೆಲ ಶಾಸಕರು ರಾಜೀನಾಮೆ ನೀಡಿ ಸರ್ಕಾರ ಕೆಡವಲು ಮುಂದಾದಲ್ಲಿ, ಬಿಜೆಪಿಯ ಐದು ಜನ ಶಾಸಕರು ನಮ್ಮ ಕಡೆಗೆ ಬರಲಿದ್ದಾರೆ ಎಂದು ಬಾಂಬ್ ಸಿಡಿಸಿದರು.

ರಾಜೀನಾಮೆ ನೀಡಿದ ಶಾಸಕರು ಸರ್ಕಾರ ಬೀಳುವುದಕ್ಕೆ ಅವಕಾಶ ಕೊಡುವುದಿಲ್ಲ. ಅಲ್ಲದೇ ನಾವು ರಾಜೀನಾಮೆ ಕೊಟ್ಟು ಸರ್ಕಾರ ಉಳಿಸುತ್ತೇವೆ ಎಂದಿದ್ದಾರೆ. ಬಿಜೆಪಿಯ ಆಪರೇಶನ್‍ಗೆ ನಾವೂ ರಿವರ್ಸ್ ಆಪರೇಶನ್ ಮಾಡುತ್ತೇವೆ. ನಾವೂ ರಾಜಕಾರಣಿಗಳು, ರಾಜಕಾರಣವನ್ನೇ ಮಾಡುತ್ತೇವೆ ಎಂದು ಹೇಳಿ ರಿವರ್ಸ್ ಆಪರೇಶನ್ ಸುಳಿವು ನೀಡಿದರು.

Leave a Reply

Your email address will not be published. Required fields are marked *