Connect with us

Bengaluru City

ಏಕದಿನ ಪಂದ್ಯದಲ್ಲಿ 300 ವಿಕೆಟ್ ಪಡೆದ ಭಾರತದ ಏಕೈಕ ವೇಗಿ ಜಾವಗಲ್ ಶ್ರೀನಾಥ್

Published

on

– ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾರತದ ಲೆಜೆಂಡ್ ವೇಗಿ
– ಮೈಸೂರ್ ಎಕ್ಸ್‌ಪ್ರೆಸ್ ಎಂದೇ ಖ್ಯಾತಿ ಪಡೆದಿದ್ದ ಶ್ರೀನಿ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಲೆಜೆಂಡ್ ವೇಗಿ ಕನ್ನಡಿಗ ಜಾವಗಲ್ ಶ್ರೀನಾಥ್ ಅವರು ಇಂದು 51ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ.

ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಕನ್ನಡಿಗರೇ ಮೇಲುಗೈ ಸಾಧಿಸಿದ್ದರು. ಕನ್ನಡಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ವೆಂಕಟೇಶ್ ಪ್ರಸಾದ್ ಮತ್ತು ಜಾವಗಲ್ ಶ್ರೀನಾಥ್ ಇವೆರೆಲ್ಲರೂ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುತ್ತಿದ್ದರು. ಅದರಲ್ಲಿ ಮೋಸ್ಟ್ ಡೆಡ್ಲಿ ವೇಗದ ಬೌಲರ್ ಎಂದರೆ ಅದೂ ಜವಾಗಲ್ ಶ್ರೀನಾಥ್ ಅವರು, ಅವರ ಬಾಲ್ ವೇಗ ಕಂಡ ಎದುರಾಳಿ ತಂಡದ ಬ್ಯಾಟ್ಸ್ ಮ್ಯಾನ್‍ಗಳು ಸುಸ್ತಾಗಿ ಹೋಗುತ್ತಿದ್ದರು.

90ರ ದಶಕದಲ್ಲಿ ಕ್ರಿಕೆಟ್ ತಂಡಗಳಲ್ಲಿ ಬೌಲರ್‍ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಅಂದಿನ ಕಾಲದಲ್ಲಿ ಬ್ಯಾಟ್ಸ್ ಮ್ಯಾನ್‍ಗಳದೇ ಮೇಲುಗೈ. ಈ ರೀತಿಯ ಸಮಯದಲ್ಲಿ ಶ್ರೀನಾಥ್ ಅವರು ಬರೋಬ್ಬರಿ 12 ವರ್ಷಗಳ ಕಾಲ ಭಾರತದ ಕ್ರಿಕೆಟ್ ತಂಡದಲ್ಲಿ ಆಡಿದ್ದರು. ಮೊದಲು ಇವರು 1991ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 157 ಕಿಮೀ ವೇಗದಲ್ಲಿ ಬೌಲ್ ಮಾಡಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದರು.

12 ವರ್ಷ ಭಾರತದ ಪರವಾಗಿ ಆಡಿದ ಅವರು, 67 ಪಂದ್ಯಗಳ ಟೆಸ್ಟ್ ವೃತ್ತಿಜೀವನದಲ್ಲಿ 236 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ ಹತ್ತು ಬಾರಿ ಒಂದು ಪಂದ್ಯದಲ್ಲಿ 5 ವಿಕೆಟ್ ಪಡೆದಿದ್ದಾರೆ. ಭಾರತದ ಪರವಾಗಿ 229 ಏಕದಿನ ಪಂದ್ಯಗನ್ನು ಆಡಿರುವ ಶ್ರೀನಾಥ್ ಅವರು, 315 ವಿಕೆಟ್‍ಗಳನ್ನು ಕಿತ್ತಿದ್ದಾರೆ. ಈ ಮೂಲಕ ಏಕದಿನದಲ್ಲಿ 300 ವಿಕೆಟ್ ಪಡೆದ ಭಾರತದ ಐಕೈಕ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ನಿವೃತ್ತಿ ಹೊಂದಿ 17 ವರ್ಷವಾದರೂ ಈ ದಾಖಲೆಯನ್ನು ಯಾರೂ ಮುರಿಯಲು ಆಗಿಲ್ಲ.

ಇದರ ಜೊತೆ ಜಾವಗಲ್ ಶ್ರೀನಾಥ್ ಅವರು ವಿಶ್ವಕಪ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಖ್ಯಾತಿಗಳಿಸಿದ್ದಾರೆ. ಈ ದಾಖಲೆಯನ್ನು ಬಾರತದ ಮತ್ತೊಬ್ಬ ವೇಗಿ ಜಾಹಿರ್ ಖಾನ್ ಜೊತೆ ಹಂಚಿಕೊಂಡಿದ್ದಾರೆ. ಒಟ್ಟು ವಿಶ್ವಕಪ್ ಪಂದ್ಯಗಳಲ್ಲಿ ಶ್ರೀನಿ 44 ವಿಕೆಟ್ ಕಬಳಿಸಿದ್ದರು. ಜಾವಗಲ್ ಶ್ರೀನಾಥ್ ಅವರು 2003ರ ವಿಶ್ವಕಪ್‍ನಲ್ಲಿ ಬಹಳ ಚೆನ್ನಾಗಿ ಆಡಿದ್ದರು. ಆದರೆ ಈ ವಿಶ್ವಕಪ್‍ನಲ್ಲಿ ಫೈನಲ್ ತಲುಪಿದ ಭಾರತ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಪಂದ್ಯದ ನಂತರ ಶ್ರೀನಾಥ್ ನಿವೃತ್ತಿ ಘೋಷಿಸಿದ್ರು. ಈ ಮೂಲಕ ಮೈಸೂರ್ ಎಕ್ಸ್‌ಪ್ರೆಸ್ ತನ್ನ ವೇಗದ ಬೌಲಿಂಗ್‍ಗೆ ಬ್ರೇಕ್ ಹಾಕಿದ್ದರು.

ಸದ್ಯ ನಿವೃತ್ತಿ ಹೊಂದಿರುವ ಜಾವಗಲ್ ಶ್ರೀನಾಥ್ ಅವರು, ಪ್ರಸ್ತುತ ಐಸಿಸಿ ಮ್ಯಾಚ್ ರೆಫರಿಯಾಗಿ ಕೆಲಸ ಮಾಡುತ್ತಿದ್ದು, ಸುಮಾರು 350 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

Click to comment

Leave a Reply

Your email address will not be published. Required fields are marked *