Connect with us

Dakshina Kannada

ಆನ್‍ಲೈನ್ ಶಿಕ್ಷಣ- ನೆಟ್‍ವರ್ಕ್ ಗಾಗಿ ಅರಣ್ಯದಲ್ಲಿ ಮರವೇರಿ ಕುಳಿತ ವಿದ್ಯಾರ್ಥಿಗಳು

Published

on

ಮಂಗಳೂರು: ಕೊರೊನಾ ಆತಂಕದ ಮಧ್ಯೆ ಶಾಲೆಗಳನ್ನ ಆರಂಭಿಸೋದು ಸದ್ಯ ಸರ್ಕಾರಕ್ಕೆ ಸವಾಲಾಗಿದೆ. ಹೀಗಾಗಿ ಅನ್‍ಲೈನ್ ತರಗತಿಗಳ ಮೂಲಕವೇ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮದ ಮಕ್ಕಳಿಗೆ ಮಾತ್ರ ಆನ್‍ಲೈನ್ ತರಗತಿಗಳಿಗೆ ಹಾಜರಾಗೋದು ಒಂದು ರೀತಿ ಸವಾಲಿನ ಕೆಲಸ. ಜಿಲ್ಲೆಯ ಸುಳ್ಯ ತಾಲೂಕು ಕೇಂದ್ರದ ಕಟ್ಟ ಕಡೆಯ ಗ್ರಾಮ ಬಾಳುಗೋಡು. ಈ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ ವಿಪರೀತವಾಗಿದೆ. ಈ ಭಾಗದ 100ಕ್ಕೂ ಅಧಿಕ ವಿದ್ಯಾರ್ಥಿಗಳು ಇದೀಗ ಅನಿವಾರ್ಯವಾಗಿ ಅರಣ್ಯ ಭಾಗದ ಗುಡ್ಡಗಳಿಗೆ ತೆರಳಿ ಮರ ಹತ್ತಿ ನೆಟ್‍ವರ್ಕ್‍ಗಾಗಿ ಹರಸಾಹಸ ಪಡುತ್ತಿದ್ದಾರೆ.

ಬಾಳುಗೋಡಿನ ಬೆಟ್ಟುಮಕ್ಕಿಯ ವಿದ್ಯಾರ್ಥಿಗಳು ನೆಟ್‍ವರ್ಕ್ ದೊರಕುವ ಎತ್ತರದ ಅರಣ್ಯದಲ್ಲಿ ಟೆಂಟ್ ನಿರ್ಮಿಸಿ ಬೋಧನೆ ಕೇಳುತ್ತಿದ್ದಾರೆ. ಹಾಗಾಗಿ ಮರವೇರಿದರೆ ಮಾತ್ರ ಈ ಭಾಗದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪಾಠ. ಅದಕ್ಕಾಗಿ ದಟ್ಟ ಅರಣ್ಯದೊಳಗೆ ನೆಟ್‍ವರ್ಕ್ ಹುಡುಕಾಟ ದಿನನಿತ್ಯ ಗೋಳಾಗಿ ಪರಿಣಮಿಸಿದೆ. ಬಾಳುಗೋಡು ಪ್ರದೇಶದಲ್ಲಿ ಯಾವುದೇ ಸಿಮ್‍ನ ನೆಟ್‍ವರ್ಕ್ ಕೂಡ ಸಿಗುತ್ತಿಲ್ಲ. ಕಾಡಿನೊಳಗೆ ಪ್ರವೇಶ ಪಡೆದು ಮರ ಏರಿ ಮೊಬೈಲ್‍ನಲ್ಲಿ ಪಾಠ ಕೇಳುತ್ತಿದ್ದಾರೆ. ಈ ಭಾಗದ ಇತರ ವಿದ್ಯಾರ್ಥಿಗಳು ಮನೆಯ ಛಾವಣೆ ಏರಿ, ಗುಡ್ಡ ಏರಿ ನೆಟ್‍ವರ್ಕ್ ಹುಡುಕಾಡಿ ಪಾಠ ಕೇಳುತ್ತಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಶಿಕ್ಷಣ- ನೆಟ್‍ವರ್ಕ್ ಅರಸಿ ಇಂದಿಗೂ ವಿದ್ಯಾರ್ಥಿಗಳ ಅಲೆದಾಟ

ಬಾಳುಗೋಡು ಸೇರಿ ಸಮೀಪದ ಕೊಲ್ಲಮೊಗ್ರು-ಕಲ್ಮಕಾರು ಗ್ರಾಮೀಣ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾದಾಗ ನೆಟ್‍ವರ್ಕ್ ವ್ಯವಸ್ಥೆ ಸ್ಥಗಿತಗೊಳ್ಳುತ್ತದೆ. ಇಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಸಂಪರ್ಕ ವ್ಯವಸ್ಥೆಗೆ ಅಡ್ಡಿಯಾಗಿದೆ. ಬಿಎಸ್‍ಎನ್‍ಎಲ್ ಟವರ್ ಜನರೇಟರ್ ಗೆ ಈ ಹಿಂದೆ ಗ್ರಾಮಸ್ಥರು ಡೀಸೆಲ್ ಒದಗಿಸುತ್ತಿದ್ದರು. ಆದರೆ ಪ್ರಸ್ತುತ ಬ್ಯಾಟರಿ ಹಾಳಾದ ಕಾರಣ ಜನರೇಟರ್ ವ್ಯವಸ್ಥೆ ಫಲ ನೀಡುತ್ತಿಲ್ಲ ಆದ್ದರಿಂದ ಶೀಘ್ರ ನೂತನ ಬ್ಯಾಟರಿ ಒದಗಿಸಲು ಜನತೆ ವಿನಂತಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಶಿಕ್ಷಣಕ್ಕೆ ಗ್ರಾಮೀಣ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ- ತರಗತಿಗಳು ವಿದ್ಯಾರ್ಥಿಗಳಿಗೆ ಮರಿಚೀಕೆ

ಕೊಲ್ಲ ಮೊಗ್ರುವಿನಲ್ಲಿ ಖಾಸಗಿ ಟವರ್ ಚಾಲ್ತಿಯಲ್ಲಿದ್ದರೂ ಅದರ ಸಂಪರ್ಕ ಕೇವಲ ಪೇಟೆಗೆ ಸೀಮಿತವಾಗಿದೆ. ಇತರ ಗ್ರಾಮೀಣ ಜನರು ಸಂಪರ್ಕ ವ್ಯವಸ್ಥೆ ಇಲ್ಲದೆ ಹೈರಾಣಾಗಿದ್ದಾರೆ. ಮಕ್ಕಳಂತೂ ಅಪಾಯಕಾರಿಯಾಗಿ ಮರ ಹತ್ತಿ ಶಿಕ್ಷಣ ಪಡೀತಾ ಇರೋದು ದುರಂತ. ಇದನ್ನೂ ಓದಿ: ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮೊಬೈಲ್ ಕದ್ದು ಸಿಕ್ಕಿಬಿದ್ದ ಬಾಲಕನಿಗೆ ಪೊಲೀಸ್ ಸರ್ಪ್ರೈಸ್ ಶಿಕ್ಷೆ

Click to comment

Leave a Reply

Your email address will not be published. Required fields are marked *