Connect with us

Karnataka

ಸಂಕಷ್ಟಕ್ಕೀಡಾಗಿದ್ದ ಈರುಳ್ಳಿ ಬೆಳೆಗಾರರು- ಬೆಲೆ ಏರಿಕೆಯಿಂದ ಕೊಂಚ ಸಂತಸ

Published

on

ರಾಯಚೂರು: ಜಿಲ್ಲೆಯ ಈರುಳ್ಳಿ ಬೆಳೆಗಾರರು ಅಪಾರ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಇದೇ ಸಂದರ್ಭದಲ್ಲಿ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡಿರುವುದು ಸ್ವಲ್ಪ ಮಟ್ಟಿನ ಸಮಾಧಾನವನ್ನುಂಟು ಮಾಡಿದೆ.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ಉತ್ತಮ ಬೆಲೆ ಸಿಗುತ್ತಿದ್ದು, 6 ಸಾವಿರ ರೂಪಾಯಿಗೆ ಒಂದು ಕ್ವಿಂಟಾಲ್ ಈರುಳ್ಳಿ ಖರೀದಿಯಾಗುತ್ತಿದೆ. ಭಾರೀ ಮಳೆಗೆ ರೈತರು ಅರ್ಧ ಬೆಳೆ ಕಳೆದುಕೊಂಡಿದ್ದಾರೆ. ಇದೀಗ ಉಳಿದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಸಮಾಧಾನಪಟ್ಟುಕೊಂಡಿದ್ದಾರೆ.

ಈ ಬಾರಿಯ ಮುಂಗಾರು ಮಳೆ ರಾಜ್ಯದ ರೈತರಲ್ಲಿ ಭಾರೀ ನಿರೀಕ್ಷೆಗಳನ್ನ ಹುಟ್ಟು ಹಾಕಿತ್ತು. ಆದರೆ ಅತೀವೃಷ್ಟಿಯಿಂದಾಗಿ ಅನ್ನದಾತರ ಆಸೆಗಳೆಲ್ಲ ಕಣ್ಣೀರಾಗಿ ಕರಗಿ ಹೋಗಿವೆ. ಇಂತಹ ಕಷ್ಟದ ಸಮಯದಲ್ಲಿ ಈರುಳ್ಳಿ ಬೆಲೆ ಹೆಚ್ಚಿರುವುದು ರೈತರಲ್ಲಿ ಸ್ವಲ್ಪ ಸಮಾಧಾನ ತಂದಿದೆ. ಬೆಳೆದ ಬೆಳೆಯಲ್ಲಿ ಅರ್ಧದಷ್ಟು ಮಳೆಗೆ ಹಾಳಾಗಿದ್ದರೂ ಇನ್ನರ್ಧ ಬೆಳೆಗೆ ಬಂಗಾರದ ಬೆಲೆ ಬಂದಿದೆ. ಹೀಗಾಗಿ ರಾಯಚೂರಿನಲ್ಲಿ ಈರುಳ್ಳಿ ಬೆಳೆದ ರೈತರು ತಕ್ಕಮಟ್ಟಿಗೆ ಸಮಾಧಾನದಲ್ಲಿದ್ದಾರೆ.

ಕ್ವಿಂಟಾಲ್ ಈರುಳ್ಳಿ ಬೆಲೆ 5 ರಿಂದ 6 ಸಾವಿರ ರೂಪಾಯಿ ತಲುಪಿದ್ದು. ಜಮೀನಿಗೆ ಖರ್ಚು ಮಾಡಿದ ಹಣವಾದರೂ ಮರಳಿ ಬಂತಲ್ಲ ಎಂದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಚಿಕ್ಕಗಡ್ಡೆಗೆ 3 ರಿಂದ 4 ಸಾವಿರ ರೂಪಾಯಿ ಸಿಗುತ್ತಿದೆ. ಜಿಲ್ಲೆಯಲ್ಲಿ ಈಗ ಹೊರಗಡೆಯಿಂದ ಬರುವ ಈರುಳ್ಳಿ ಪ್ರಮಾಣ ಕಡಿಮೆಯಾಗಿದ್ದು, ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಮೊದಲೇ ಈರುಳ್ಳಿ ಸಂಗ್ರಹಿಸಿಟ್ಟುಕೊಂಡಿದ್ದವರಿಗೆ ಉತ್ತಮ ಲಾಭ ಸಿಗುತ್ತಿದೆ. ಬೆಳೆ ಇನ್ನೂ ಜಮೀನಿನಲ್ಲಿದ್ದವರು ಬೆಳೆನಷ್ಟ ಅನುಭವಿಸಿದ್ದಾರೆ. ಅತೀಯಾದ ಮಳೆಗೆ ಜಿಲ್ಲೆಯ ಲಿಂಗಸಗೂರು , ರಾಯಚೂರು ತಾಲೂಕಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಈರುಳ್ಳಿ ಹಾಳಾಗಿದೆ.

ಬೆಲೆ ಹೆಚ್ಚಳದ ಜೊತೆಗೆ ತರಕಾರಿ ಮಾರುಕಟ್ಟೆಗೆ ಈರುಳ್ಳಿ ಬರುತ್ತಿಲ್ಲ. ಹೀಗಾಗಿ ಪ್ರತಿದಿನ ಐದಾರು ಕ್ವಿಂಟಾಲ್ ಈರುಳ್ಳಿ ಮಾರುತ್ತಿದ್ದ ತರಕಾರಿ ವ್ಯಾಪಾರಿಗಳು ಈಗ ಒಂದೆರಡು ಕ್ವಿಂಟಾಲ್ ಮಾರಿದರೆ ಹೆಚ್ಚು ಎನ್ನುವಂತಾಗಿದೆ. ಮಹಾರಾಷ್ಟ್ರದ ನಾಂದೆಡ್, ಔರಂಗಬಾದ್, ನಾಸಿಕ್, ಪುಣೆಯಿಂದ ಬರುತ್ತಿದ್ದ ಈರುಳ್ಳಿ ಪ್ರಮಾಣ ಮಳೆಯಿಂದ ತಗ್ಗಿದೆ. ಹೀಗಾಗಿ ಈರುಳ್ಳಿ ಬೆಲೆ ತರಕಾರಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 60 ರಿಂದ 120 ರೂ.ವರೆಗೆ ನಡೆಯುತ್ತಿದೆ. ಸಣ್ಣ ಗಡ್ಡೆ ಸಹ ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ.

ರೈತರಿಗೆ ಸಂತೋಷವಾದರೆ ಹಬ್ಬದ ಸಮಯದಲ್ಲಿ ಈರುಳ್ಳಿ ದುಬಾರಿಯಾಗಿರುವುದು ಗ್ರಾಹಕರಿಗೆ ಬೇಸರ ಮೂಡಿಸಿದೆ. ಈರುಳ್ಳಿ ಜೊತೆಗೆ ಬಹುತೇಕ ಎಲ್ಲ ತರಕಾರಿ ಬೆಲೆ ಏರಿಕೆಯಾಗಿರುವುದು ಗ್ರಾಹಕರಿಗೆ ಹೊರೆಯಾಗಿದೆ.

Click to comment

Leave a Reply

Your email address will not be published. Required fields are marked *