Connect with us

Bengaluru City

ಒಂದು ಚೆಂಡಿನಿಂದ ರಾಕಿಯ ಜೀವನವೇ ಬದಲಾಯ್ತು

Published

on

ಬೆಂಗಳೂರು: ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಆರು ದಿನ ಕಳೆದ್ರೂ ಚಿತ್ರದ ಜ್ವರ ಮಾತ್ರ ಕಡಿಮೆಯಾಗಿಲ್ಲ. ಸಾಮಾನ್ಯವಾಗಿ ವೀಕೆಂಡ್ ದಿನಗಳಲ್ಲಿ ಮಾತ್ರ ಚಿತ್ರಮಂದಿರ ತುಂಬಿರುತ್ತದೆ ಎಂಬ ಮಾತಿದೆ. ಈ ಮಾತನ್ನು ಕೆಜಿಎಫ್ ಸುಳ್ಳಾಗಿಸಿದ್ದು, ಇಂದಿಗೂ ಥಿಯೇಟರ್ ನತ್ತ ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಹಲವು ವಿಶೇಷತೆಗಳನ್ನು ಈ ಸಿನಿಮಾ ಒಳಗೊಂಡಿದ್ದು, ಎಲ್ಲರೂ ಸಲಾಂ ರಾಕಿ ಭಾಯ್ ಎಂದು ಹೇಳುತ್ತಿದ್ದಾರೆ.

ಕೆಜಿಎಫ್ ನಲ್ಲಿ ಹುಟ್ಟಿದ್ದ ಹುಡುಗ ಮುಂದೊಂದು ದಿನ ಬಾಂಬೆ ಲೋಕದ ಅಧಿಪತಿಯಾಗ್ತಾನೆ. ಅಧಿಪತಿಯಾದ ರಾಕಿ ಆಕಸ್ಮಿಕವಾಗಿ ಕೆಜಿಎಫ್ ಎಂಬ ಅಮಾನುಷ ಲೋಕಕ್ಕೆ ಹಿಂದಿರುಗುತ್ತಾನೆ. ಗುರಿ ಇಟ್ಟುಕೊಂಡು ಕೆಜಿಎಫ್ ಸೇರುವ ರಾಕಿ ತನ್ನ ಸಾಧನೆಗಾಗಿ ಕಾಯುತ್ತಿರುತ್ತಾನೆ. ಅಲ್ಲಿ ನಡೆಯುವ ಅಮಾನುಷ ಕೃತ್ಯಗಳನ್ನು ಕಂಡರೂ ಎದೆಯ ಮೇಲೊಂದು ಕಲ್ಲು ಇಟ್ಟುಕೊಂಡು ಸುಮ್ಮನಿರುತ್ತಾನೆ. ಆದ್ರೆ ಒಂದು ಚೆಂಡು ರಾಕಿಯ ಜೀವನವನ್ನೇ ಬದಲಾವಣೆ ಮಾಡುತ್ತದೆ. ಆ ಒಂದು ಘಟನೆಯಿಂದಾಗಿ ರಾಕಿ ಅಲ್ಲಿಯ ಜನರೊಂದಿಗೆ ಬೆರೆತುಕೊಳ್ಳುತ್ತಾನೆ. ಹಾಗಾದ್ರೆ ಆ ಘಟನೆ ಏನು ಅಂತೀರಾ, ಅದನ್ನು ನೀವು ಬಿಗ್ ಸ್ಕ್ರೀನ್ ಮೇಲೆ ನೋಡಿದರೆ ಚೆಂದ. ಹಾಗಾಗಿ ರಾಕಿಯನ್ನು ಬದಲಾಯಿಸಿದ ಆ ಚೆಂಡಿನ ಕಥೆಯನ್ನು ನೀವು ಸಿನಿಮಾದಲ್ಲೇ ನೋಡಿ.

ಸಿನಿಮಾದಲ್ಲಿ ಲಾಜಿಕ್ ಹುಡುಕದೇ ಮ್ಯಾಜಿಕ್ ನೋಡಿ. ಪ್ರತಿಯೊಂದು ಸನ್ನಿವೇಶಗಳ ಪಾತ್ರಗಳಲ್ಲಿ ನೀವು ಕಾಣಿಸಿಕೊಳ್ಳುತ್ತೀರಿ. ಪ್ರಶಾಂತ್ ನೀಲ್ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಮುಂದಿನ ಭಾಗ ಹೇಗಿರುತ್ತೆ? ಅಲ್ಲಿ ನಡೆಯುವುದಾದ್ರೂ ಏನು? ಕೆಜಿಎಫ್ ಘಟನೆಗಳು ರಾಕಿಯ ಮೇಲೆ ಯಾವ ಪರಿಣಾಮ ಬೀರುತ್ತಾ? ತಾಯಿಗೆ ಕೊಟ್ಟ ಮಾತಿನಂತೆ ಪವರ್ ಹುಡುಕಿ ಹೊರಟವನ ಜೀವನದಲ್ಲಿ ಹೊರಟ ಮಗನ ಜೀವನ ಮುಂದೇನು ಎಂಬಿತ್ಯಾದಿ ಪ್ರಶ್ನೆಗಳು ಸಿನಿಮಾ ನೋಡಿ ಹೊರ ಬರುವವರಲ್ಲಿ ಹುಟ್ಟಿಕೊಳ್ಳುವುದು ಸತ್ಯ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಾದ್ರೆ ಚಾಪ್ಟರ್-2 ಗಾಗಿ ಕಾಯಲೇಬೇಕು.

ಸಿನಿಮಾದುದ್ದಕ್ಕೂ ಅನಂತ್ ನಾಗ್ ಅವರ ಧ್ವನಿ ನಿಮ್ಮನ್ನು ಮೋಡಿ ಮಾಡುತ್ತೆ. ಸಿನಿಮಾದ ಹಿನ್ನೆಲೆ ಸಂಗೀತ ಚಿತ್ರದ ಪ್ರತಿಯೊಂದು ಸನ್ನಿವೇಶಗಳನ್ನು ರಗಢ್ ಲುಕ್ ನಲ್ಲಿ ತೋರಿಸಲು ಯಶಸ್ವಿಯಾಗಿದೆ. ಕೆಲ ನಿಮಿಷ ಬಂದು ಹೋಗುವ ತಮನ್ನಾ ಭಾಟಿಯಾ ಅಭಿಮಾನಿಗಳನ್ನು ರಂಜಿಸುವಲ್ಲಿ ನಾನೇನು ಕಡಿಮೆ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಚಿತ್ರದ ಬಹುಪಾಲು ಕಲಾವಿದರ ಧ್ವನಿಯೇ ಕೆಜಿಎಫ್ ಸಿನಿಮಾದ ಪ್ಲಸ್ ಪಾಯಿಂಟ್ ಆಗಿದೆ. ಕನ್ನಡದ ಕಿರೀಟ ಅಂತಾ ಕೆಜಿಎಫ್ ಕರೆಸಿಕೊಳ್ಳುತ್ತಿದ್ದು, 100 ಕೋಟಿಯ ಕ್ಲಬ್ ಸೇರಿದ ಮೊದಲ ಚಂದನವನದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನು ನೀವು ಸಿನಿಮಾ ನೋಡಿಲ್ವಾ? ಹಾಗಾದ್ರೆ ನೋಡಿ. ನಿಮಗೆ ಸಿನಿಮಾದ ಯಾವ ಭಾಗ, ದೃಶ್ಯ, ಕಲಾವಿದ ಇಷ್ಟ ಆದ್ರು? ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv