Wednesday, 23rd October 2019

ಕೈ ಅತೃಪ್ತರಿಗೆ ಬಲೆ ಬೀಸಲು ಕೇಸರಿ ಪಡೆ ರಣತಂತ್ರ!

– ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಈಗ ಅತೃಪ್ತರ ಚಿಂತೆ..!

ಬೆಂಗಳೂರು: ಸಂಪುಟ ಪುನಾರಚನೆ ಬೆನ್ನಲ್ಲೇ ದೋಸ್ತಿಗಳಿಗೆ ಆಪರೇಷನ್ ಕಮಲದ ಸಂಕಟ ಎದುರಾಗಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮೂಲಗಳು ತಿಳಿಸಿವೆ.

ಕೆಲವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು. ಈ ನಿಟ್ಟಿನಲ್ಲಿ ಹೈಕಮಾಂಡ್ ಮಟ್ಟದಲ್ಲಿಯೂ ಲಾಬಿ ನಡೆಸಿದ್ದರು. ಆದರೆ ಸಚಿವ ಸ್ಥಾನ ಕೈತಪ್ಪಿತು ಎನ್ನುವ ನಿರಾಸೆ ಕಾಂಗ್ರೆಸ್ ಶಾಸಕರಾದ ಬಿ.ಸಿ.ಪಾಟೀಲ್, ನಾಗೇಂದ್ರ, ಭೀಮಾನಾಯಕ್, ಡಾ.ಸುಧಾಕರ್ ಸೇರಿದಂತೆ ಅನೇಕರಲ್ಲಿ ಮೂಡಿದೆ. ಇದೇ ಸರಿಯಾದ ಸಮಯ ಅಂತ ಬಿಜೆಪಿ ರಾಜ್ಯ ನಾಯಕರು ಆಪರೇಷನ್ ಕಮಲಕ್ಕೆ ಕೈಹಾಕಲಿದ್ದಾರೆ ಎನ್ನುವ ಭೀತಿ ಕಾಂಗ್ರೆಸ್ ಗೆ ಎದುರಾಗಿದೆ ಎನ್ನಲಾಗಿದೆ.

ಶಾಸಕ ಶ್ರೀರಾಮುಲು ಹಾಗೂ ವಿಜಯೇಂದ್ರ ನಾಳೆ ಬೆಳಗ್ಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಹೀಗಾಗಿ ಬಳ್ಳಾರಿ ನೆಲದಿಂದಲೇ ಆಪರೇಷನ್‍ಗೆ ಕೈಹಾಕಲು ನಿರ್ಧರಿಸಿದ್ದಾರಂತೆ. ಈ ನಿಟ್ಟಿನಲ್ಲಿ ಯಾರಿಗೆ ಮೊದಲು ಗಾಳ ಹಾಕಬೇಕು. ಯಾರನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬೇಕು ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಸಲಿದ್ದಾರಂತೆ.

ರಮೇಶ್ ಜಾರಕಿಹೊಳಿ ಟಾರ್ಗೆಟ್:
ಬೆಳಗಾವಿಯ ಕಾಂಗ್ರೆಸ್ ನಾಯಕ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ನಾಯಕ ಜೊತೆಗೆ ಗುರುತಿಸಿಕೊಂಡು ಭಾರೀ ಚರ್ಚೆಗೆ ಒಳಗಾಗಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡ ಮೇಲಂತೂ ರಮೇಶ್ ಜಾರಕಿಹೊಳಿ ರಾಜ್ಯ ನಾಯಕರು ಹಾಗೂ ಹೈಕಮಾಂಡ್ ಮೇಲೆ ಮುನಿಸಿಕೊಂಡಿದ್ದಾರೆ. ಇದೇ ಸರಿಯಾದ ಸಮಯವೆಂದು ಯೋಚಿಸಿರುವ ಬಿಜೆಪಿ ನಾಯಕರು ರಮೇಶ್ ಜಾರಕಿಹೊಳಿ ಮೂಲಕ ಶಾಸಕರಾದ ನಾಗೇಂದ್ರ, ಅಜಯ್ ಸಿಂಗ್, ಭೀಮಾನಾಯಕ್ ಸೆಳೆಯಲು ತಂತ್ರ ರೂಪಿಸಿದ್ದಾರೆ ಎಂದು ಕಾಂಗ್ರೆಸ್‍ನಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಒಂದು ವೇಳೆ ರಮೇಶ್ ಜಾರಕಿಹೊಳಿ ಹಾಗೂ ಅವರ ಬಣದ ಶಾಸಕರು ತಮ್ಮ ಸ್ಥಾನ ಹಾಗೂ ಪಕ್ಷಕ್ಕೆ ಗುಡ್‍ಬೈ ಹೇಳಿ ಬಿಜೆಪಿ ಸೇರಿದರೆ ಭಾರೀ ಮೈತ್ರಿ ಸರ್ಕಾರ ಸಂಕಷ್ಟಕ್ಕೆ ಸಿಲುಕಲಿದೆ. ಕಲಾಪದ ವೇಳೆ ಬಿಜೆಪಿ ನಾಯಕರ ಜೊತೆಗೆ ಗುರುತಿಸಿಕೊಂಡು ಕಾಂಗ್ರೆಸ್‍ಗೆ ಶಾಕ್ ನೀಡಿದ್ದ ರಮೇಶ್ ಜಾರಕಿಹೊಳಿ, ಈಗ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಗ್ ಶಾಕ್ ಕೊಡಲಿದ್ದಾರೆಯೇ ಎನ್ನುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *