Tuesday, 17th September 2019

Recent News

ಗೋಮಾಂಸ ಸಾಗಿಸ್ತಿದ್ದಾರೆಂದು ಮರಕ್ಕೆ ಕಟ್ಟಿ ಥಳಿಸಿದ ಯುವಕರು!

ಭೋಪಾಲ್: ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ನಾಲ್ವರನ್ನು ಮರಕ್ಕೆ ಕಟ್ಟಿಹಾಕಿ ಯುವಕರು ಥಳಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಮಧ್ಯ ಪ್ರದೇಶದ ಒಂದು ಹಳ್ಳಿಯಲ್ಲಿ ಆಟೋರಿಕ್ಷಾದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ರಸ್ತೆ ಮಧ್ಯದಲ್ಲಿ ಆಟೋವನ್ನು ಅಡ್ಡಗಟ್ಟಿದ ಯುವಕರ ಗುಂಪು ಯುವತಿ ಹಾಗೂ 4 ಮಂದಿ ಯುವಕರಿಗೆ ಮನಬಂದಂತೆ ಥಳಿಸಿದ್ದಾರೆ.

ಈ ಘಟನೆ ಮೇ 22 ರಂದು ನಡೆದಿದ್ದು ಸ್ಥಳದಲ್ಲಿ ಸಾರ್ವಜನಿಕರು ಇದ್ದು ವಿಡಿಯೋ ಮಾಡುತ್ತಿದ್ದರೇ ವಿನಃ ಯಾರು ಕೂಡ ಪೊಲೀಸರಿಗೆ ಮಾಹಿತಿ ನೀಡಿಲ್ಲ. ವಿಡಿಯೋದಲ್ಲಿ ಕೆಲ ಯುವಕರ ಗುಂಪು “ಜೈ ಶ್ರೀರಾಮ್” ಎಂದು ಘೋಷಣೆ ಕೂಗುತ್ತಾ ಯುವತಿಯ ತಲೆಗೆ ಚಪ್ಪಲಿಯಿಂದ ಹೊಡೆಯುತ್ತಿದ್ದಾರೆ. ಮತ್ತು ಕೆಲ ಯುವಕರನ್ನು ಮರಕ್ಕೆ ಕಟ್ಟಿ ಅವರಿಗೆ ದೊಣ್ಣೆಗಳಿಂದ ಹೊಡೆಯುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

ಮೇ 23 ರಂದು ಈ ವಿಡಿಯೋವನ್ನು ಶುಭಮ್ ಸಿಂಗ್ ಎಂಬ ಶ್ರೀ ರಾಮ ಸೇನಾ ಕಾರ್ಯಕರ್ತ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ನಂತರ ತೆಗೆದು ಹಾಕಿದ್ದನು. ಈ ಆಧಾರದ ಮೇಲೆ ವಿಚಾರಣೆ ಮಾಡಿರುವ ಪೊಲೀಸರು ವಿಡಿಯೋದಲ್ಲಿ ಕಾಣುವ ಸಿಯೋನಿ ನಗರದ ಐದು ಜನ ಯುವಕರನ್ನು ಬಂಧಿಸಿದ್ದಾರೆ.

ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪೊಲೀಸ್ ಅಧಿಕಾರಿ ಲಲಿತ್ ಶಕ್ಯಾವರ್, ಈ ವಿಡಿಯೋ 4 ದಿನಗಳ ಹಳೆಯದ್ದಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ನಾಲ್ಕು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಇಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದ್ದು ಅವನನ್ನು ನ್ಯಾಯಾಲಯಕ್ಕೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.

ಈ ಘಟನೆಯನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಖಂಡಿಸಿದ್ದಾರೆ. ಮಧ್ಯ ಪ್ರದೇಶದಲ್ಲಿ ಗೋಹತ್ಯೆ ವಿಷಯದಲ್ಲಿ ಅಮಾಯಕ ಮುಸ್ಲಿಂರನ್ನು ಹೊಡೆಯುತ್ತಿದ್ದಾರೆ. ಈ ವಿಚಾರದ ಬಗ್ಗೆ ಕಮಲ್ ನಾಥ್ ಅವರು ಶೀಘ್ರ ಕ್ರಮ ಕೈಗೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *