Friday, 22nd February 2019

ಮೋದಿ ಕಾರ್ಯಕ್ರಮದಲ್ಲಿ ಸಚಿವನಿಂದ ಮಹಿಳಾ ಮಂತ್ರಿಗೆ ಲೈಂಗಿಕ ಕಿರುಕುಳ!

– ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯ
– ವಿಡಿಯೋವನ್ನು ತಿರುಚಲಾಗಿದೆ ಎಂದ ಬಿಜೆಪಿ

ಅಗರತಲಾ: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿಯೇ ಸಚಿವರೊಬ್ಬರು ಮಹಿಳಾ ಸಚಿವೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯ ಕೇಳಿಬರುತ್ತಿದೆ.

ಬಿಜೆಪಿ ಸಚಿವ ಮನೋಜ್ ಕಾಂತಿ ಡೆಬ್ ವೇದಿಕೆ ಮೇಲೆಯೇ ಬುಡಕಟ್ಟು ಜನಾಂಗಕ್ಕೆ ಸೇರಿರುವ ಸಮಾಜ ಕಲ್ಯಾಣ ಹಾಗೂ ಸಾಮಾಜಿಕ ಶಿಕ್ಷಣ ಸಚಿವೆ ಶಾಂತನಾ ಚಕ್ಮಾ ಸೊಂಟ ಮುಟ್ಟಿದ್ದಾರೆ. ಸಚಿವರ ಅಸಭ್ಯ ವರ್ತನೆ ವಿರುದ್ಧ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳು ಆಕ್ರೋಶ ಹೊರಹಾಕಿವೆ.

ಬಿಜೆಪಿ ಸರ್ಕಾರವಿರುವ ತ್ರಿಪುರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 9ರಂದು ಕೆಲವು ಯೋಜನೆಗಳ ಉದ್ಘಾಟನೆ ನೆರವೇರಿಸಿದರು. ಪ್ರಧಾನಿ ಮೋದಿ ಅವರ ಬಲ ಎದುರಿಗೆ ನಿಂತಿದ್ದ ಮನೋಜ್ ಕಾಂತಿ ಡೆಬ್ ಅವರು ಪಕ್ಕದಲ್ಲಿ ನಿಂತಿದ್ದ ಸಚಿವೆಯ ಸೊಂಟ ಹಿಡಿದಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಸಚಿವೆ ಮನೋಜ್ ಕಾಂತಿ ಡೆಬ್ ಅವರಿಂದ ತಪ್ಪಿಸಿಕೊಂಡಿದ್ದಾರೆ.

ವೇದಿಕೆಯ ಮೇಲೆ ಸಚಿವರು ಸೊಂಟ ಹಿಡಿಯುತ್ತಿರುವ ದೃಶ್ಯವು ಸ್ಥಳೀಯ ಮಾಧ್ಯಮ ಹಾಗೂ ಕಾರ್ಯಕ್ರದಲ್ಲಿ ಸೇರಿದ್ದ ಜನರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಚಿವರ ನಡೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಪ್ರಧಾನಿ ನರೇಂದ್ರ ಮೋದಿ, ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ಡೆಬ್ ಹಾಗೂ ಸಾರ್ವಜನಿಕರು ಸೇರಿದ್ದ ಕಾರ್ಯಕ್ರದಲ್ಲೇ ಸಚಿವ ಮನೋಜ್ ಕಾಂತಿ ಡೆಬ್ ಮಹಿಳಾ ಮಂತ್ರಿಯ ಸೊಂಟ ಮುಟ್ಟಿದ್ದಾರೆ. ಮಹಿಳೆಯನ್ನು ಅವಮಾನಿಸಿದ ಹಾಗೂ ಅಸಭ್ಯವಾಗಿ ಸ್ಪರ್ಶ ಮಾಡಿದ ಸಚಿವರನ್ನು ಬಂಧಿಸಬೇಕು ಎಂದು ಎಡಪಂಥೀಯ ಸಂಚಾಲಕ ಬಿಜಾನ್ ಧಾರ್ ಒತ್ತಾಯಿಸಿದ್ದಾರೆ.

ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಕೇವಲ 11 ತಿಂಗಳು ಕಳೆದಿದೆ. ಇಷ್ಟು ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸಚಿವರಿಗೆ ಶಿಕ್ಷಯಾಗಲೇಬೇಕು ಎಂದು ಬಿಜಾನ್ ಧಾರ್ ಆಗ್ರಹಿಸಿದ್ದಾರೆ.

ಬಿಜೆಪಿ ಸಚಿವ ವಿರುದ್ಧ ವಿವಿಧ ಪಕ್ಷಗಳು ಹಾಗೂ ಸ್ಥಳೀಯ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ತ್ರಿಪುರಾ ವಿರೋಧ ಪಕ್ಷವು ಸಚಿವರ ವಿರುದ್ಧ ದೂರು ನೀಡಿದೆ.

ಈ ಕುರಿತು ತ್ರಿಪುರಾ ಬಿಜೆಪಿ ವಕ್ತಾರ ನಬೆಂದೂ ಭಟ್ಟಾಚಾರ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಆಡಳಿತ ಪಕ್ಷ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ಸಚಿವರು ಈ ರೀತಿ ನಡೆದುಕೊಂಡಿಲ್ಲ. ವಿರೋಧ ಪಕ್ಷಗಳು ವಿಡಿಯೋವನ್ನು ತಿರುಚಿವೆ ಎಂದು ಆರೋಪಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *