Connect with us

Bengaluru City

ಜಿದ್ದಾಜಿದ್ದಿನ ಆರ್‌ಆರ್‌ ನಗರ, ಶಿರಾಕ್ಕೆ ನಾಳೆ ಮತದಾನ- ಇವತ್ತು ಮನೆ ಮನೆ ಮತಬೇಟೆ

Published

on

ಬೆಂಗಳೂರು: ಸಾಕಷ್ಟು ಜಿದ್ದಾಜಿದ್ದಿನ ಮತ್ತು ಪ್ರತಿಷ್ಠೆಗೆ ಸಾಕ್ಷಿ ಆಗಿರುವ ಉಪ ಚುನಾವಣೆ ಮತದಾನಕ್ಕೆ ಇನ್ನೊಂದೇ ದಿನ ಬಾಕಿ. ನಿನ್ನೆ ಬಹಿರಂಗ ಪ್ರಚಾರ ಅಂತ್ಯ ಆಗಿದ್ದು, ಇವತ್ತು ಮನೆ ಮನೆಗೆ ತೆರಳಿ ಮತಯಾಚಿಸುವುದಕ್ಕೆ ಅವಕಾಶ ಇದೆ.

21 ದಿನಗಳಿಂದ ನಡೆದಿದ್ದ ಪ್ರಚಾರ ಈಗ ನಿರ್ಣಾಯಕ ಹಂತ ತಲುಪಿದೆ. ಬಹಿರಂಗ ಪ್ರಚಾರದ ಅವಧಿ ಮುಗಿದಂತೆ ಕ್ಷೇತ್ರದ ಮತದಾರರಲ್ಲದವರೂ ಕೂಡಾ ಕ್ಷೇತ್ರವನ್ನು ಖಾಲಿ ಮಾಡಿ ತೆರಳಬೇಕಾಗುತ್ತದೆ. ನಾಳೆ ಮತದಾನ ನಡೆಯಲಿದೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ನಡುವೆ ಸ್ಪರ್ಧೆ ಇದೆ. ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ ಬಿ ಜಯಚಂದ್ರ, ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ಮತ್ತು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ಸ್ಪರ್ಧೆ ಇದೆ. ನವೆಂಬರ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ.

ಇದರ ನಡುವೆ ಅಲ್ಲಲ್ಲಿ ಕುರುಡು ಕಾಂಚಣದ ಕುಣಿತ ಜಾಸ್ತಿ ಆಗ್ತಿದೆ ಅನ್ನೋ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಸೋಲು ಗೆಲುವಿನ ರಣತಂತ್ರಗಳು, ಲೆಕ್ಕಾಚಾರಗಳು ಜೋರಾಗಿದೆ. ಶಾಂತಿಯುತ ಮತದಾನಕ್ಕೆ ಬೇಕಾದಂತ ಸಕಲ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ.

ಬಹಿರಂಗ ಪ್ರಚಾರದ ಅಂತಿಮ ದಿನದಂದು ಅಗ್ರ ನಾಯಕರ ಮಧ್ಯೆ ವಾಕ್ಸಮರವೇ ನಡೆದಿತ್ತು. ಕಾಂಗ್ರೆಸ್-ಬಿಜೆಪಿಯ ಪ್ರತಿಷ್ಠೆಯ ಹೈವೋಲ್ಟೇಜ್ ಕಣವಾಗಿರೋ ಆರ್‍ಆರ್ ನಗರದಲ್ಲಿ ಡಿಕೆ ಶಿವಕುಮಾರ್ ವರ್ಸಸ್ ಮುನಿರತ್ನ ನಡುವೆ ಜಿದ್ದಾಜಿದ್ದಿ ನಡೆದಿದೆ. ಆದರೆ ಜನಾಶೀರ್ವಾದ ನಮ್ಮ ಪರ ಇದೆ ಅಂತ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತ ಶಿರಾದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಾ ಪರವಾಗಿ ದಳಪತಿಗಳು ನಿನ್ನೆ ಭರ್ಜರಿ ರ‍್ಯಾಲಿಗಳನ್ನು ನಡೆಸಿದರು. ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮಾರನ್ನು ಗೆಲ್ಲಿಸಲೇಬೇಕು ಎಂಬ ಹಠಕ್ಕೆ ಬಿದ್ದಿರೋ ಜೆಡಿಎಸ್, ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಶಿರಾದಲ್ಲಿ ರ‍್ಯಾಲಿ ನಡೆಸಿದ್ದರು. ಅಮ್ಮಾಜಮ್ಮ ಅವರು ಸೆರಗೊಡ್ಡಿ ಮತಯಾಚನೆ ಮಾಡಿದ್ದರು.

Click to comment

Leave a Reply

Your email address will not be published. Required fields are marked *