Connect with us

ವೃದ್ಧೆಯ ಕತ್ತು ಹಿಸುಕಿ ಕಳ್ಳರಿಂದ ಹಣ ದೋಚಲು ಯತ್ನ – ಓರ್ವ ಸೆರೆ

ವೃದ್ಧೆಯ ಕತ್ತು ಹಿಸುಕಿ ಕಳ್ಳರಿಂದ ಹಣ ದೋಚಲು ಯತ್ನ – ಓರ್ವ ಸೆರೆ

– ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ವೃದ್ಧೆ

ಶಿವಮೊಗ್ಗ: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯ ಕತ್ತು ಹಿಸುಕಿ ಯುವಕರಿಬ್ಬರು ಹಣ ದೋಚಲು ಯತ್ನಿಸಿದ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಕಲು ಗ್ರಾಮದಲ್ಲಿ ನಡೆದಿದೆ.

ಭವಾನಿಯಮ್ಮ (85) ಕೊಲೆಯಾದ ವೃದ್ಧೆ. ಕಟ್ಟೆಹಕ್ಕಲು ಗ್ರಾಮದ ಗಣಪತಿ ದೇವಸ್ಥಾನದ ಮುಂಭಾಗದ ಮನೆಯಲ್ಲಿ ಭವಾನಿಯಮ್ಮ ವಾಸವಾಗಿದ್ದರು. ಭವಾನಿಯಮ್ಮ ಅವರ ಮನೆಗೆ ಶಿವಮೊಗ್ಗದ ಶಿವು ಹಾಗೂ ನಿತಿನ್ ನೀರು ಕೇಳುವ ನೆಪದಲ್ಲಿ ಬಂದಿದ್ದಾರೆ, ವೃದ್ಧೆಯ ಮೇಲೆ ದಾಳಿ ನಡೆಸಿ ಹಣ ದೋಚಲು ಯತ್ನಿಸಿದ್ದಾರೆ. ನಂತರ ವೃದ್ಧೆ ಚೀರಾಟ ನಡೆಸಿದ್ದರಿಂದ ಕಳ್ಳರು ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಸ್ಥಳೀಯರು ಓರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆಯಿಂದಾಗಿ ವೃದ್ಧೆ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಸ್ಥಳೀಯರು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ವೃದ್ದೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಇಬ್ಬರು ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ದೇವಸ್ಥಾನದ ಆಭರಣ ಹಾಗೂ ಹುಂಡಿ ಕಳ್ಳತನ ನಡೆಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದರು. ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾರೆ ಎನ್ನಲಾಗಿದೆ. ಜಾಮೀನಿನ ಮೇಲೆ ಹೊರಗೆ ಬಂದಿದ್ದರೂ ತಮ್ಮ ಚಾಳಿಯನ್ನು ಮಾತ್ರ ಬಿಡದೇ ಮುಂದುವರಿಸಿದ್ದಾರೆ. ಇವರ ಕಳ್ಳತನದ ದಾಹಕ್ಕೆ ಅಮಾಯಕ ವೃದ್ದೆಯೊಬ್ಬರು ಬಲಿಯಾಗುವಂತೆ ಆಗಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈಗಾಗಲೇ ಆರೋಪಿ ನಿತಿನ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ನಾಪತ್ತೆಯಾಗಿರುವ ಮತ್ತೊಬ್ಬ ಆರೋಪಿ ಶಿವು ಪತ್ತೆಗೆ ಬಲೆ ಬೀಸಿದ್ದಾರೆ.

 

Advertisement
Advertisement