Connect with us

Chikkamagaluru

ಭೂಕುಸಿತದಿಂದಾಗಿ ನದಿಯಲ್ಲಿ ಕೊಚ್ಚಿ ಹೋದ ಅಡಿಕೆ ಬೆಳೆ

Published

on

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದಲ್ಲಿ ಭೂಕುಸಿತದಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

ಪಶ್ಚಿಮ ಘಟ್ಟಗಳ ಸಾಲಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜಿಲ್ಲೆಯ ಕೊಪ್ಪ, ಕಳಸ, ಹೊರನಾಡು ಹಾಗೂ ಕುದುರೆಮುಖದ ಗುಡ್ಡಗಾಡು ಪ್ರದೇಶಗಳಿಂದ ನೀರು ಹರಿದು ಬರುತ್ತಿವೆ. ಮಳೆ ನೀರಿನಿಂದಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಮೂಡಿಗೆರೆ ತಾಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ನಾಲ್ಕು ವರ್ಷಗಳ ಬಳಿಕ ಹೇಮಾವತಿ ಕಳೆದೊಂದು ತಿಂಗಳಿಂದಲೂ ಮೈದುಂಬಿ ಹರಿಯುತ್ತಿದ್ದಾಳೆ. ನೀರಿನ ಹರಿವಿನ ಪ್ರಮಾಣ ಯಥೇಚ್ಛವಾಗಿರುವುದರಿಂದ ನದಿಪಾತ್ರದ ಜಮೀನಿನಲ್ಲಿ ಭೂಕುಸಿತ ಉಂಟಾಗಿದೆ. ಭೂಕುಸಿತದಿಂದಾಗಿ 30 ಕ್ಕೂ ಹೆಚ್ಚು ಅಡಿಕೆ ಮರಗಳು ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿವೆ.

ನೀರು ತೋಟದ ದಡದ ಮಣ್ಣನ್ನ ಕೊರೆಯುತ್ತಿರುವುದರಿಂದ ಅಡಿಕೆ, ಕಾಫಿ ಹಾಗೂ ಮೆಣಸು ಬೆಳೆಗಳು ನಾಶಹೊಂದಿ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಇನ್ನು ಅಪಾಯದಮಟ್ಟ ಮೀರಿ ಹರಿಯುತ್ತಿರುವ ಹೇಮಾವತಿ ನದಿಯಿಂದಾಗಿ ತೋಟದ ಮಾಲೀಕರು ಹಾಗೂ ಸ್ಥಳಿಯರಲ್ಲಿ ಆತಂಕ ಹೆಚ್ಚಾಗಿದೆ.