Connect with us

Chikkamagaluru

ಕೈ-ಕಮಲ-ದಳ ಸಾಥ್: ಕಾಫಿನಾಡಿನ ಎನ್.ಆರ್.ಪುರ ಬಂದ್

Published

on

ಚಿಕ್ಕಮಗಳೂರು: ಶತಮಾನಗಳ ಬದುಕೇ ಬೀದಿಗೆ ಬೀಳುತ್ತೆ ಅಂದಾಗ ಹೋರಾಟ ಅನಿವಾರ್ಯ. ಅಂತಹ ಹೋರಾಟಕ್ಕೆ ಜಿಲ್ಲೆಯ ಎನ್.ಆರ್.ಪುರ ತಾಲೂಕು ಮುಂದಾಗಿದೆ.

ಬದುಕಿಗಿಂತ ರಾಜಕೀಯ-ರಾಜಕಾರಣ ದೊಡ್ಡದ್ದಲ್ಲ. ಹಾಗಾಗಿ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮರಣ ಶಾಸನವಾಗಿರೋ ಭದ್ರಾ ಹುಲಿ ಯೋಜನೆಯ ಬಫರ್ ಜ್ಹೋನ್, ಪರಿಸರ ಸೂಕ್ಷ್ಮ ವಲಯದ ವಿರುದ್ಧ ಎನ್.ಆರ್.ಪುರ ತಾಲೂಕಿನ ಜನ ಪಕ್ಷಾತೀತವಾಗಿ ಹೋರಾಟಕ್ಕಿಳಿದಿದ್ದಾರೆ. ಇಂದು ಬೆಳಗ್ಗೆ ಏಳು ಗಂಟೆಯಿಂದ ಇಡೀ ದಿನ ಎನ್.ಆರ್.ಪುರ ತಾಲೂಕು ಸಂಪೂರ್ಣ ಸ್ತಬ್ಧಗೊಂಡಿದೆ.

ಮೈಸೂರಿನ ಅರಸರಾದ ನರಸಿಂಹರಾಜ ಒಡೆಯರ್ ಈ ಊರಿಗೆ ಬಂದಿದ್ದ ನೆನಪಿನಾರ್ಥ ಈ ಊರಿಗೆ ನರಸಿಂಹರಾಜಪುರ ಎಂದೇ ಹೆಸರು ಬಂದಿದೆ. ಸಾವಿರಾರು ವರ್ಷಗಳ ಇತಿಹಾಸವಿರೋ ತಾಲೂಕಿನಲ್ಲಿ ಶೇಕಡ 80ಕ್ಕಿಂತ ಹೆಚ್ಚು ಜನ ಕೃಷಿ, ಕೃಷಿಯಾಧಾರಿತ ಕಸುಬನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಬದುಕಿನ ಜೊತೆ ಕಾಫಿ-ಮೆಣಸು, ಅಡಿಕೆ-ತೆಂಗು-ಬಾಳೆ ಸೇರಿದಂತೆ ಪರಿಸರವನ್ನೂ ಹಚ್ಚಹಸಿರಾಗಿಟ್ಟಿದ್ದಾರೆ. ಆದರೆ ಈಗ ಭದ್ರಾ ಹುಲಿ ಯೋಜನೆಯ ಬಫರ್ ಜ್ಹೋನ್ ಹಾಗೂ ಸೂಕ್ಷ್ಮ ಪರಿಸರ ವಲಯದಿಂದ ತಾಲೂಕು ಬಹುತೇಕ ಭಾಗವೇ ಇಲ್ಲದಂತಾಗುತ್ತೆ. ಹಾಗಾಗಿ ಬದುಕಿನ ಉಳಿವಿಗಾಗಿ ಜನ ಎನ್.ಆರ್.ಪುರ ಬಂದ್‍ಗೆ ಕೆರೆ ನೀಡಿದ್ದಾರೆ. ಮಲೆನಾಡು ರೈತರ ಹಿತ ರಕ್ಷಣಾ ಸಮಿತಿ, ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಮತ್ತು ಸೂಕ್ಷ್ಮ ಪರಿಸರ ವಲಯದ ವಿರುದ್ಧ ಬಂದ್ ಹಾಗೂ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಪಕ್ಷಾತೀತವಾಗಿ ತಾಲೂಕಿನ ಎಲ್ಲಾ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮಲೆನಾಡಿನ ಜನರ ಬದುಕಿನ ಮೇಲೆ ಬರೆ ಎಳೆಯಲು ಹೊರಟಿರುವ ಜನವಿರೋಧಿ ಅರಣ್ಯ ಯೋಜನೆಗಳ ವಿರುದ್ಧ ಮಲೆನಾಡಿಗರು ಹೋರಾಟಕ್ಕೆ ಮುಂದಾಗಿದ್ದಾರೆ. ಈಗಾಗಲೇ ಭದ್ರಾ ವನ್ಯಜೀವಿ ಅಭಯಾರಣ್ಯ, ಭದ್ರಾ ಜಲಾಶಯದ ಹೆಸರಿನಲ್ಲಿ ತಾಲೂಕಿನ ಬಹಳಷ್ಟು ಭಾಗವನ್ನ ಕಳೆದುಕೊಂಡಿರೋ ಮಲೆನಾಡಿಗರಿಗೆ ಭವಿಷ್ಯದಲ್ಲಿ ತಾಲೂಕಿನ ಉಳಿವಿನ ಬಗ್ಗೆಯೂ ಆತಂಕ ಹುಟ್ಟಿದೆ.

ಭದ್ರಾ ಹುಲಿ ಯೋಜನೆಯ ಬಫರ್ ಜ್ಹೋನ್ ಹಾಗೂ ಪರಿಸರ ಸೂಕ್ಷ್ಮ ವಲಯ ಹೆಸರಿನಲ್ಲಿ ತಾಲೂಕಿನ ಹತ್ತಾರು ಗ್ರಾಮಗಳೇ ಕಣ್ಮರೆಯಾಗಲಿವೆ. ಹಾಗಾಗಿ ಬದುಕೇ ಇತಿಹಾಸದ ಪುಟ ಸೇರುವ ಮುನ್ನ ವ್ಯವಸ್ಥೆ ಹಾಗೂ ಕಾಯ್ದೆ ವಿರುದ್ಧ ಪಕ್ಷಾತೀತವಾಗಿ ಹೋರಾಟಕ್ಕೆ ಮುಂದಾಗಿದ್ದಾರೆ. ಆದ್ದರಿಂದ ಜನ ಜನವಿರೋಧಿ ಹಾಗೂ ರೈತ ವಿರೋಧಿ ಯೋಜನೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬದುಕಿಗಿಂತ ದೊಡ್ಡದ್ದು ಯಾವುದೂ ಇಲ್ಲವೆಂದು ಇಂದು ತಾಲೂಕಿನ ಎಲ್ಲಾ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಎನ್.ಆರ್.ಪುರ ತಾಲೂಕು ಬಂದ್‍ಗೆ ಮುಂದಾಗಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in