Connect with us

Chikkamagaluru

ಭದ್ರಾ ಹುಲಿ ಯೋಜನೆ: ಬಫರ್ ಝೋನ್ ವಿರುದ್ಧ ಸಿಡಿದೆದ್ದ ಅನ್ನದಾತ

Published

on

– ಚುನಾವಣೆ ಬಹಿಷ್ಕಾರ ಎಚ್ಚರಿಕೆ, ಎನ್‍ಆರ್ ಪುರ ಬಂದ್ ಯಶಸ್ವಿ

ಚಿಕ್ಕಮಗಳೂರು: ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಹಾಗೂ ಪರಿಸರ ಸೂಕ್ಷ್ಮ ವಲಯದ ವಿರುದ್ಧ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸರ್ವ ಪಕ್ಷ, ವಿವಿಧ ಸಂಘಟನೆಗಳು ಹಾಗೂ ಮಲೆನಾಡು ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಎನ್.ಆರ್.ಪುರ ತಾಲೂಕು ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಗ್ಗೆ 7 ಗಂಟೆಯಿಂದಲೇ ತಾಲೂಕಿನ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ತಾಲೂಕಿನ ಜನರು ಬಂದ್‍ಗೆ ಬೆಂಬಲ ಸೂಚಿಸಿದ್ದರು. ಸುಮಾರು ಐದು ಸಾವಿರಕ್ಕೂ ಅಧಿಕ ಜನ ಸುರಿಯೋ ಮಳೆಯಲ್ಲೇ ನಗರದ ಸರ್ಕಾರಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಿ ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯ 30ಕ್ಕೂ ಅಧಿಕ ಹಳ್ಳಿಗಳು ಸೇರಿದಂತೆ ದೇವಸ್ಥಾನ, ಮಠ, ಚರ್ಚ್, ಮಸೀದಿಗಳ ಜೊತೆ ಸಾವಿರಾರು ಅನ್ನದಾತರ ಬದುಕು ಕೂಡ ಇತಿಹಾಸದ ಪುಟ ಸೇರಲಿವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಬದುಕಿನ ಉಳಿವಿಗಾಗಿ ಎನ್.ಆರ್ ಪುರ ತಾಲೂಕು ಬಂದ್ ಗೆ ಕೊಟ್ಟಿದ್ದ ಕರೆಗೆ ನಿರೀಕ್ಷೆಗೂ ಮೀರಿ ರೈತರು ಪಾಲ್ಗೊಂಡಿದ್ದು ಬಂದ್ ಯಶಸ್ವಿಯಾಗಿದೆ. ಇದೇ ಮೊದಲ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಹಳ್ಳಿ-ಹಳ್ಳಿಯಿಂದ ರೈತರು ಬಂದು ಜನವಿರೋಧಿ ನೀತಿ ವಿರುದ್ಧ ಕಿಡಿ ಕಾರಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ನೆರೆದ ರೈತರು, ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಹಾಗೂ ಪರಿಸರ ಸೂಕ್ಷ್ಮ ವಲಯ ಯೋಜನೆಯ ವಿರುದ್ಧ ಅಸಮಾಧಾನ ಹೊರಹಾಕಿದರು.

ಪಕ್ಷಾತೀತವಾಗಿ ನಡೆದ ಈ ಬಂದ್‍ಗೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘಟನೆ ಹಾಗೂ ರೈತರು ಭಾಗವಹಿಸಿದ್ದರು. ಮೆರವಣಿಗೆಯ ಬಳಿಕ ತಾಲೂಕು ಕಚೇರಿಯಲ್ಲಿ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಯಾವುದೇ ಕಾರಣಕ್ಕೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನವಿರೋಧಿ ಯೋಜನೆಯನ್ನು ಜಾರಿಗೆ ತಂದು ಜನರ ಬದುಕಿಗೆ ಕಲ್ಲು ಹಾಕೋ ಕೆಲಸ ಮಾಡಬಾರದು. ಒಂದು ವೇಳೆ ಆ ಪ್ರಯತ್ನಕ್ಕೆ ಮುಂದಾದರೆ ತಾಲೂಕಿನ ಜನ ಮುಂದಿನ ಎಲ್ಲಾ ಚುನಾವಣೆಗಳನ್ನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. ಸಾವಿರಾರು ಜನರು ಭಾಗಿಯಾಗಿದ್ದ ಪ್ರತಿಭಟನಾ ಸಮಾವೇಶದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಡಿ.ಎನ್.ಜೀವರಾಜ್, ಶಾಸಕ ಟಿ.ಡಿ.ರಾಜೇಗೌಡ ಸೇರಿದಂತೆ ಮೂರು ಪಕ್ಷಗಳ ಮುಖಂಡರು ಭಾಗಿಯಾಗಿದ್ದರು.

Click to comment

Leave a Reply

Your email address will not be published. Required fields are marked *