Connect with us

Davanagere

ಜಿಂದಾಲ್ ಹೋರಾಟಗಾರರಿಗೆ ನೋಟಿಸ್ – ಕೋಟಾ ಶ್ರೀನಿವಾಸ ಪೂಜಾರಿ ಖಂಡನೆ

Published

on

ದಾವಣಗೆರೆ: ಜಿಂದಾಲ್ ಹೋರಾಟಗಾರರಿಗೆ ನೋಟಿಸ್ ನೀಡಿದ ವಿಚಾರವನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಖಂಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಇದೇ ವಿಚಾರಕ್ಕೆ ಪಾದಯಾತ್ರೆ ಮಾಡಿದ್ದರು. ಅದಿರು ಕೊಳ್ಳೆ ಹೊಡೆಯುವುದನ್ನು ನಿಲ್ಲಿಸುತ್ತೇನೆ ಅಂದಿದ್ದರು. ಆದರೆ ಈಗ ಮೈತ್ರಿ ಸರ್ಕಾರ ಪುಡಿಗಾಸಿಗೆ ಭೂಮಿ ನೀಡಿದೆ. ಅದು ನಾಲ್ಕೈದು ಸಾವಿರ ಕೋಟಿ ಬೆಲೆ ಬಾಳುವ ಭೂಮಿಯಾಗಿದೆ. ಅದನ್ನ ನೂರಾರು ಕೋಟಿ ರೂ.ಗೆ ನೀಡಿದ್ದಾರೆ. ಆದರೂ ಸಿದ್ದರಾಮಯ್ಯ ಮೌನವಾಗಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಆಶೀರ್ವಾದ ಇದ್ದಂತಿದೆ. ಈ ಬಗ್ಗೆ ಕೂಡಲೇ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರ ಉಪಸಮಿತಿ ರಚಿಸಿ ನಾಟಕ ಮಾಡುತ್ತಿದೆ. ಜಿಂದಾಲ್ ಹೋರಾಟದಿಂದ ಬಿಜೆಪಿ ಹಿಂದೆ ಸರಿಯಲ್ಲ. ಇದನ್ನ ಅಧಿವೇಶನದಲ್ಲಿ ದೊಡ್ಡ ವಿಷಯವಾಗಿ ಚರ್ಚಿಸುತ್ತೇವೆ. ಒಂದಿಂಚು ಭೂಮಿಯನ್ನ ಜಿಂದಾಲ್ ಗೆ ನೀಡಲು ಬಿಡುವುದಿಲ್ಲ. ಇದರಲ್ಲಿ ಭಾರೀ ಪ್ರಮಾಣದ ಅಕ್ರಮ ಹಣದ ವ್ಯವಹಾರ ನಡೆದಿರುವ ಶಂಕೆ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಪೂಜಾರಿ ಒತ್ತಾಯಿಸಿದ್ದಾರೆ.

ಬಿಜೆಪಿ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ ಎಂದು ಮಾಜಿ ಎಂ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದ ಕೋಟಾ, ಸಿಎಂ ಗ್ರಾಮ ವಾಸ್ತವ್ಯದಿಂದ ಅಹಿಂದ ಕಾಣೆಯಾಗಿದೆ. ಅದನ್ನ ಸಿದ್ದರಾಮಯ್ಯ ಹುಡುಕುತ್ತಿದ್ದಾರೆ. ಸಿದ್ದರಾಮಯ್ಯಗೆ ತಮ್ಮ ತಪ್ಪಿನ ಅರಿವಾಗಿದೆ. ಹೀಗಾಗಿ ಈಸ್ಟ್ ಇಂಡಿಯಾ ಕಂಪನಿ ಅಂದಿದ್ದಾರೆ. ಈ ಬಗ್ಗೆ ಯೋಚನೆ ಮಾಡಿ. ನಿಮ್ಮ ತಪ್ಪು ನಿಮಗೆ ಅರಿವಾಗಲಿದೆ ಎಂದು ಹೇಳಿದ್ದಾರೆ.

ಹೋರಾಟ ಮಾಡಿದವರಿಗೆ ನೋಟಿಸ್:
ಜಿಂದಾಲ್ ಗೆ ಭೂಮಿ ಪರಭಾರೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಂದಾಲ್ ವಿರುದ್ಧ ಹೋರಾಟ ಮಾಡಿದವರಿಗೆ ಕಾನೂನು ಸುವ್ಯವಸ್ಥೆ ಭಂಗ ಆರೋಪದಲ್ಲಿ ನೋಟಿಸ್ ನೀಡಲಾಗಿದೆ. ಜೂನ್ 15ರಂದು ವಾಟಾಳ್ ನಾಗರಾಜ್ ಜೊತೆ ಸೇರಿ, ಜಿಂದಾಲ್ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಹೀಗಾಗಿ ಸೆಕ್ಷನ್ 107 ಶಾಂತಿಭಂಗ ಆರೋಪದಡಿ ಸಂಡೂರು ತಹಶೀಲ್ದಾರರು 10 ಮಂದಿಗೆ ನೋಟಿಸ್ ನೀಡಿದ್ದಾರೆ.

ತೋರಣಗಲ್ ಪೊಲೀಸರ ಶಿಫಾರಸು ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಯರಿಸ್ವಾಮಿ, ಯುಸೂಫ್, ವೆಂಕಟೇಶ, ಬಿ.ಸ್ವಾಮಿ. ಮಲ್ಲಿಕಾರ್ಜುನ, ಶಿವಕುಮಾರ್, ವೀರೇಶ್ ರಾಜ, ರವಿಕುಮಾರ್, ಬಿ.ಆರ್. ಕೃಷ್ಣ, ಸಂಡೂರು ಬಳ್ಳಾರಿ ಹೊಸಪೇಟೆ ಭಾಗದ ಹೋರಾಟಗಾರಿಗೆ ನೋಟಿಸ್ ನೀಡಲಾಗಿದೆ. 3 ಲಕ್ಷದ ಬಾಂಡ್ ನೀಡಬೇಕು, ಸಮಾವೇಶ ರಸ್ತೆ ತಡೆ ಮಾಡಲ್ಲವೆಂದು ಮುಚ್ಚಳಿಕೆ ಬರೆದು ಕೊಡಬೇಕು. ಒಂದು ವರ್ಷಕ್ಕೆ ಅನ್ವಯವಾಗುವಂತೆ ಮುಚ್ಚಳಿಕೆ ಕೊಡಬೇಕು ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.