Bengaluru City
ಈಡೇರದ ಭರವಸೆ – ನಾಳೆ ಮತ್ತೆ ಪ್ರತಿಭಟನೆಗೆ ಮುಂದಾದ ಸಾರಿಗೆ ಸಿಬ್ಬಂದಿ

ಬೆಂಗಳೂರು: ನೀಡಿದ್ದ ಭರವಸೆಯನ್ನು ಈಡೇರಿಸದ ಸರ್ಕಾರದ ವಿರುದ್ಧ ನಾಳೆ ಮತ್ತೆ ಪ್ರತಿಭಟನೆ ನಡೆಸಲು ಬಿಎಂಟಿಸಿ, ಕೆಎಸ್ಆರ್ಟಿಸಿ ಸಿಬ್ಬಂದಿ ಮುಂದಾಗಿದ್ದಾರೆ.
ಕಳೆದ ಡಿಸೆಂಬರ್ 11ರಿಂದ 14ರವರೆಗೆ ಹಠಾತ್ ಮುಷ್ಕರ ನಡೆಸಿದ ಸಂದರ್ಭದಲ್ಲಿ ಬೇಡಿಕೆ ಈಡೇರಿಸುವ ಭರವಸೆಯ ಸರ್ಕಾರ ನೀಡಿತ್ತು. ಸರ್ಕಾರ ಭರವಸೆಗೆ ಒಪ್ಪಿ ಸಿಬ್ಬಂದಿ ತಮ್ಮ ಮುಷ್ಕರವನ್ನು ಕೈ ಬಿಟ್ಟಿದ್ದರು.
ನೀಡಿದ್ದ ಭರವಸೆ ಈಡೇರದ ಹಿನ್ನೆಲೆಯಲ್ಲಿ ನಾಳೆ ಬಿಎಂಟಿಸಿ ಕೇಂದ್ರ ಕಚೇರಿ ಮುಂಭಾಗ 4 ವಿಭಾಗದ ಸಿಬ್ಬಂದಿ ಜಂಟಿ ವೇದಿಕೆಯ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಸಾಲಕ್ಕೆ ಶಾಂತಿನಗರ ಟಿಟಿಎಂಸಿ ಅಡಮಾನ – ಪ್ರತಿ ತಿಂಗಳು ಬಿಎಂಟಿಸಿ ಪಾವತಿಸುತ್ತಿದೆ 1.04 ಕೋಟಿ ಬಡ್ಡಿ
ಯಾಕೆ ಪ್ರತಿಭಟನೆ?
ಡಿಸೆಂಬರ್ ತಿಂಗಳ ಅರ್ಧ ವೇತನದ ಜೊತೆ ಜನವರಿ ತಿಂಗಳ ಸಂಬಳವನ್ನೂ ಸರ್ಕಾರ ಪಾವತಿಸಿಲ್ಲ. ಸಂಬಳ ಉಳಿಸಿಕೊಂಡಿರುವ ಸರ್ಕಾರ ಮೂರ್ನಾಲ್ಕು ದಿನದಲ್ಲಿ ಹಾಕಲಾಗುವುದು ಎಂದು ಹೇಳಿತ್ತು. ಆದರೆ ಬಾಕಿ ವೇತನವನ್ನು ಇನ್ನೂ ಹಾಕಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಸಾರಿಗೆ ಸಂಸ್ಥೆಗಳ ಸಿಬ್ಬಂದಿ ತಿರುಗಿ ಬಿದ್ದಿದ್ದಾರೆ.
ರಜೆ ಇಲ್ಲ:
ಪ್ರತಿಭಟನೆ ನಡೆಸಲು ಸಿಬ್ಬಂದಿ ಮುಂದಾಗಿರುವ ವಿಚಾರ ತಿಳಿದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಆಗಬಾರದು ಎಂಬ ಕಾರಣಕ್ಕೆ ಅನಿವಾರ್ಯ ಕಾರಣ ಹೊರತುಪಡಿಸಿ ರಜೆ ಮಂಜೂರು ಮಾಡುವಂತಿಲ್ಲ ಎಂದು ಬಿಎಂಟಿಸಿ ಸುತ್ತೋಲೆ ಹೊರಡಿಸಿದೆ.
