Crime
ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಗೆ 7 ವರ್ಷ ಜೈಲು ಶಿಕ್ಷೆ

– 5 ವರ್ಷದ ಹಿಂದಿನ ಪ್ರಕರಣ
ಲಕ್ನೋ: 5 ವರ್ಷಗಳ ಹಿಂದೆ ತಂದೆಯೊಬ್ಬ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ್ದನು. ಇದೀಗ ಅಪರಾಧಿ ತಂದೆಗೆ ನೋಯ್ಡಾ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ನಿರಂಜನ್ ಕುಮಾರ್ ಅವರು ತಂದೆಗೆ 7 ವರ್ಷ ಜೈಲು ಶಿಕ್ಷೆ, ಹಾಗೂ 5 ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ 6 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ:ಫೆಬ್ರವರಿ 2015 ರಲ್ಲಿ, ನೋಯ್ಡಾ ಮೂಲದ ಮಹಿಳೆಯೊಬ್ಬರು ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ತನ್ನ ಗಂಡ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಳು. ಮಹಿಳೆ ಆರೋಪಿ ಪತಿ ವಿರುದ್ಧ ನೋಯ್ಡಾದ ಸೆಕ್ಟರ್ 24 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ನಂತರ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಇದೀಗ ಹೆಚ್ಚುವರಿ ಸೆಷನ್ಸ್ ವಿಶೇಷ ನ್ಯಾಯಾಧೀಶ ನಿರಂಜನ್ ಕುಮಾರ್ ಅವರು ಪೋಸ್ಕೋ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣ ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ.
