Connect with us

Latest

ಯಾರ ಮಗ ಆಗಿದ್ದರೂ ಸರಿ ಪಕ್ಷದಿಂದ ಹೊರಗೆ ಹಾಕಿ: ಮೋದಿ ಕೆಂಡಾಮಂಡಲ

Published

on

ನವದೆಹಲಿ: ಇತ್ತೀಚೆಗೆ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ಅವಮಾನಿಸಿದ್ದ ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯ್‍ವರ್ಗಿಯಾ ಅವರ ಮಗ ಹಾಗೂ ಶಾಸಕ ಆಕಾಶ್ ವಿಜಯ್‍ವರ್ಗಿಯಾ ವಿರುದ್ಧ ಪ್ರಧಾನಿ ಮೋದಿ ಕೆಂಡಾಮಂಡಲರಾಗಿದ್ದು, ಯಾರ ಮಗ ಆಗಿದ್ದರೂ ಸರಿ, ಪಕ್ಷದಿಂದ ಹೊರ ಹಾಕಿ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಈ ವಿಷಯದ ಕುರಿತು ಕೆಂಡಾಮಂಡಲರಾಗಿದ್ದು, ಈ ರೀತಿ ದುರ್ವರ್ತನೆ ತೋರುವ ನಾಯಕರನ್ನು ಮುಲಾಜಿಲ್ಲದೆ, ಯಾವ ನಾಯಕರ ಮಗನೆಂದೂ ನೋಡದೆ ಪಕ್ಷದಿಂದ ಹೊರ ಹಾಕಿ ಎಂದು ಗುಡುಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಷ್ಟಕ್ಕೆ ಸುಮ್ಮನಾಗದ ಪ್ರಧಾನಿ ಮೋದಿ, ಆಕಾಶ್ ವಿಜಯ್‍ವರ್ಗಿಯಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವರನ್ನು ಸ್ವಾಗತಿಸಿದವರನ್ನೂ ಪಕ್ಷದಿಂದ ಹೊರಗಡೆ ಹಾಕಿ ಎಂದು ಕಿಡಿ ಕಾರಿದ್ದಾರೆ.

ಸಭೆಯ ಬಳಿಕ ರಾಜೀವ್ ಪ್ರತಾಪ್ ರೂಡಿಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ ಅವರು ಈ ವಿಚಾರದಲ್ಲಿ ಅಸಮಾಧಾನಗೊಂಡಿದ್ದಾರೆ. ಪಕ್ಷದ ಹೆಸರನ್ನು ಹೇಳಿಕೊಂಡು ಅಸಭ್ಯ ವರ್ತನೆ ನಡೆಸಲು ಯಾರಿಗೂ ಅವಕಾಶವಿಲ್ಲ. ಈ ರೀತಿ ವರ್ತನೆ ತೋರಿದ ಯಾರನ್ನೂ ಸಹಿಸಲು ಸಾಧ್ಯವಿಲ್ಲ ಎಂದು ಕಠಿಣ ಪದಗಳಲ್ಲಿ ಹೇಳಿದ್ದಾರೆ ಎಂದು ತಿಳಿಸಿದರು.

ಶಾಸಕ ಆಕಾಶ್ ವಿಜಯ್‍ವರ್ಗಿಯಾ ಕಳೆದ ವಾರ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ಅವಮಾನಿಸಿದ್ದರು. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಶಾಸಕನನ್ನು ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಹೊರ ಬಂದ ಆಕಾಶ್ ವಿಜಯ್‍ವರ್ಗಿಯಾ ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದರು. ಇಂದೋರ್‍ನಲ್ಲಿ ನಡೆದ ಈ ಘಟನೆಯ ವಿಡಿಯೊ ವೈರಲ್ ಆಗಿತ್ತು. ಅಲ್ಲದೆ, ವಿಪರೀತ ಚರ್ಚೆಗೆ ಗ್ರಾಸವಾಗಿತ್ತು. ಶಾಸಕ ಆಕಾಶ್ ಹಾಗೂ ಆತನ ಬೆಂಬಲಿಗರು ಪೊಲೀಸರು ಹಾಗೂ ಟಿವಿ ವಾಹಿನಿ ಸಿಬ್ಬಂದಿಯ ಎದುರೇ ಸರ್ಕಾರಿ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್ ಹಿಡಿದು ಬೆನ್ನಟ್ಟಿದ್ದರು. ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.

ಅಂದು ನಡೆದಿದ್ದು ಏನು?
ಇಂದೋರ್ ನಗರದಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ ಕಟ್ಟಡಗಳನ್ನು ಇಂದು ಅಧಿಕಾರಿಗಳು ತೆರವುಗೊಳಿಸುತ್ತಿದ್ದರು. ಆದರೆ ಶಾಸಕರು ತಮ್ಮ ಬೆಂಬಲಿಗನ ಕಟ್ಟಡ ತೆರವುಗೊಳಿಸದಂತೆ ಸೂಚನೆ ನೀಡಿದ್ದರು. ಇದಕ್ಕೆ ಕ್ಯಾರೆ ಎನ್ನದ ಅಧಿಕಾರಿಗಳು ಕಟ್ಟಡ ತೆರವುಗೊಳಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಶಾಸಕ ಆಕಾಶ್ ವಿಜಯ್ ವರ್ಗೀಯ ಅವರು ಅಧಿಕಾರಿಗೆ ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದಿದ್ದರು. ಅಷ್ಟೇ ಅಲ್ಲದೆ ಶಾಸಕರ ಬೆಂಬಲಿಗರು ಅಧಿಕಾರಿಯ ಅಂಗಿ ಹಿಡಿದು ಎಳೆದಾಡಿದ್ದರು. ಘಟನೆಯಿಂದ ತಕ್ಷಣವೇ ಜಾಗೃತಗೊಂಡ ಪೊಲೀಸರು ಅಧಿಕಾರಿಯನ್ನು ರಕ್ಷಿಸಿದ್ದರು.