Connect with us

Bengaluru City

ನೋ ಕಾಮೆಂಟ್, ಅವರವರ ಭಾವ ಅವರವರದ್ದು- ರಘು ಆಚಾರ್ ಆರೋಪಕ್ಕೆ ವಿನಯ್ ಗುರೂಜಿ ಪ್ರತಿಕ್ರಿಯೆ

Published

on

ಬೆಂಗಳೂರು: ನೋ ಕಾಮೆಂಟ್, ಅವರವರ ಭಾವ ಅವರವರದ್ದು. ಅವರು ಹೇಳಿದ ಸನ್ನಿವೇಶ ಅಲ್ಲಿರಲಿಲ್ಲ ಎಂದು ಕಾಂಗ್ರೆಸ್‌ ಪರಿಷತ್‌ ಸದಸ್ಯ ರಘು ಆಚಾರ್‌ ಆರೋಪಕ್ಕೆ ವಿನಯ್‌ ಗುರೂಜಿ ಪ್ರತಿಕ್ರಿಯಿಸಿದ್ದಾರೆ.

ಗೋಹತ್ಯೆ ನಿಷೇಧ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುವ ಸಂಬಂಧ ಇಂದು ವಿನಯ್‌ ಗುರೂಜಿ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಭೇಟಿಯ ಬಳಿಕ ಮಾಧ್ಯಮಗಳು ರಘು ಆಚಾರ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ನಾನೇ ನಿಶ್ಚಯ ಮಾಡಿದ ಮದುವೆ ಇದು. ಲಿಂಗಾಯತರಲ್ಲಿ ಒಂದು ಸಂಪ್ರದಾಯ ಇದೆ. ಗುರುಗಳು ಊಟ ಮಾಡಿದ ಮೇಲೆ ಉಳಿದ ಊಟವನ್ನು ಭಕ್ತರು ಪ್ರಸಾದವಾಗಿ ಸ್ವೀಕರಿಸುವ ಪದ್ಧತಿ ಇದೆ. ನಾನು ಊಟ ಮಾಡಿದ ಮೇಲೆ ತಟ್ಟೆ ಎಲ್ಲಿಟ್ಟಿದ್ದೇನೆ. ಲೋಟ ಎಲ್ಲಿಟ್ಟಿದ್ದೇನೆ ಎಂದು ನೋಡುವುದಕ್ಕೆ ಆಗುವುದಿಲ್ಲ. ನನ್ನ ಗಮನಕ್ಕೆ ಬರದೇ ಈ ಪ್ರಸಂಗ ನಡೆದಿದೆ. ನನ್ನ ಗಮನಕ್ಕೆ ಬಂದಿದ್ದರೆ ಗಾಂಧಿವಾದ ರೀತಿ ಖಂಡಿಸುತ್ತಿದ್ದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಸಾದವೆಂದು ಬಲವಂತವಾಗಿ ಎಂಜಲು ತಿನ್ನಿಸಿದರು: ವಿನಯ್ ಗುರೂಜಿ ಮೇಲೆ ಕೈ ನಾಯಕ ಗರಂ

ಸಿಎಂ ಜೊತೆ ಚರ್ಚೆ ನಡೆಸಿದ ವಿಷಯಕ್ಕೆ ಕೇಳಲಾದ ಪ್ರಶ್ನೆಗೆ, ಗೋಹತ್ಯೆ ನಿಷೇಧ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುವ ವಿಷಯ ಕುರಿತು ಚರ್ಚಿಸಲು ಬಂದಿದ್ದೆವು. ಹಿಂದೂ ಧರ್ಮದಲ್ಲಿ ನಾವು ಗೋವುಗಳಿಗೆ ವಿಶೇಷ ಗೌರವ ನೀಡಿದ್ದೇವೆ. ರಾಷ್ಟ್ರೀಯ ಪಕ್ಷಿ, ಪ್ರಾಣಿಗೆ ಹೇಗೆ ಈಗ ಕಾನೂನು ಇದೆಯೇ ಅದೇ ರೀತಿ ಕಾನೂನು ತರಬೇಕೆಂದು ನಾವು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಗೋಹತ್ಯೆ ನಿಷೇಧ ಅನಿವಾರ್ಯ ಇದೆ. ಅಧಿಕಾರಿಗಳ ಚರ್ಚೆ ಮಾಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ನಾನು ಕೊಟ್ಟ ಸಲಹೆಗಳನ್ನು ಸಿಎಂ ಅವರು ಇಲ್ಲಿಯವರೆಗೆ ನಿರಾಕರಿಸಿಲ್ಲ. ಈ ಮನವಿಯನ್ನೂ ಈಡೇರಿಸುವ ಭರವಸೆ ಇದೆ ಎಂದು ಹೇಳಿದರು.

ಕಳೆದ ವಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್‌, ರಾಜ್ಯ ಸರಕಾರವು ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲಿದೆ. ಜಾನುವಾರುಗಳ ರಕ್ಷಣೆಗೆ ಸರಕಾರ ಹೊಸ ಕ್ರಮಗಳನ್ನು ಜಾರಿಗೊಳಿಸಲಿದೆ ಎಂದು ಹೇಳಿದ್ದರು.

Click to comment

Leave a Reply

Your email address will not be published. Required fields are marked *