Saturday, 25th January 2020

ಜಮ್ಮು ಕಾಶ್ಮೀರದಲ್ಲಿನ ನಿರ್ಬಂಧ ಹಿಂಪಡೆಯುವವರೆಗೆ ದ್ವಿಪಕ್ಷೀಯ ಮಾತುಕತೆ ಇಲ್ಲ- ಇಮ್ರಾನ್ ಖಾನ್

ನವದೆಹಲಿ: ಜಮ್ಮು ಕಾಶ್ಮೀರದಲ್ಲಿನ ನಿರ್ಬಂಧ ಹಾಗೂ ಕಫ್ರ್ಯೂ ಹಿಂಪಡೆಯುವವರೆಗೆ ಭಾರತದೊಂದಿಗೆ ಪಾಕಿಸ್ತಾನ ಸರ್ಕಾರ ಯಾವುದೇ ರೀತಿಯ ದ್ವಿಪಕ್ಷೀಯ ಮಾತುಕತೆ ನಡೆಸುವುದಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿನ ಸ್ಥಳೀಯ ವಾಹಿನಿಯೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಿರ್ಬಂಧ ಹಿಂಪಡೆಯುವವರೆಗೆ ಭಾರತದೊಂದಿಗೆ ಮಾತುಕತೆ ನಡೆಸಲು ಯಾವುದೇ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

370ನೇ ವಿಧಿ ರದ್ದು ಪಡಿಸಿದ ನಂತರ ಭಾರತದ ವಿರುದ್ಧ ಕೆಂಡಾಮಂಡಲವಾಗಿರುವ ಇಮ್ರಾನ್ ಖಾನ್, ಭಾರತದೊಂದಿಗೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಈ ಹಿಂದೆ ಹೇಳಿದ್ದರು. ಅಲ್ಲದೆ ಭಾರತದ ನಿರ್ಧಾರದ ವಿರುದ್ಧ ಪಾಕಿಸ್ತಾನ ತನ್ನ ನಿಲುವನ್ನು ಬೆಂಬಲಿಸುವಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಿಸುತ್ತಿದೆ.

ಆದರೆ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರ ಸಾಂವಿಧಾನಿಕ ಮಾರ್ಗಸೂಚಿಗಳಿಗೆ ಸಂಬಂಧಿಸಿದೆ. ಈ ಕುರಿತು ಭಾರತ ಹಲವು ಬಾರಿ ಪುನರುಚ್ಛರಿಸಿದೆ. ಅಲ್ಲದೆ, ಜಮ್ಮು ಕಾಶ್ಮೀರದ ವಿಚಾರ ಆಂತರಿಕವಾಗಿದ್ದು, ಇದರಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುವ ಹಕ್ಕಿಲ್ಲ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತಿಳಿಸಿದೆ.

370ನೇ ವಿಧಿ ರದ್ದುಗೊಳಿಸಿರುವುದರಿಂದ ಜಮ್ಮು ಕಾಶ್ಮೀರದ ಜನರಿಗೆ ಉತ್ತಮ ಜೀವನ ಪರಿಸ್ಥತಿ ಉಂಟಾಗಲಿದೆ ಎಂದು ಭಾರತೀಯ ರಾಯಭಾರಿಗಳು ವಿವರಿಸಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಜಮ್ಮು ಕಾಶ್ಮೀರದ ವಿಚಾರ ಬಿಡಿ. ಇನ್ನು ಏನಿದ್ದರೂ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ವಿಚಾರದ ಬಗ್ಗೆ ಮಾತ್ರ ಚರ್ಚೆ. ಅದು ನಮಗೆ ಸೇರಬೇಕು ಎಂದು ಹೇಳಿಕೆ ನೀಡಿದ ನಂತರ, ಇಮ್ರಾನ್ ಖಾನ್ ಇನ್ನೂ ಕೆಂಡಾಮಂಡಲವಾಗಿದ್ದಾರೆ. ಇಂತಹ ‘ಬೇಜವಾಬ್ದಾರಿಯುತ ಹಾಗೂ ಯುದ್ಧಮಾಡುವ’ ಹೇಳಿಕೆಗಳನ್ನು ನೀಡುವುದರ ಕುರಿತು ಎಚ್ಚರಿಸಿದ್ದು, ಇಂತಹ ಹೇಳಿಕೆಗಳು ಎರಡೂ ದೇಶಗಳ ನಡುವಿನ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಲು ಕಾರಣವಾಗಬಹುದು ಎಂದಿದ್ದಾರೆ.

Leave a Reply

Your email address will not be published. Required fields are marked *