Connect with us

Latest

15 ಸಾವಿರದಲ್ಲಿ ಸ್ಟಾರ್ಟ್ ಅಪ್, 4ನೇ ತಿಂಗಳಿನಲ್ಲಿ ಸಿಕ್ತು 15 ಲಕ್ಷ ಫಂಡಿಂಗ್- ಕಂಪನಿಯ ಮೌಲ್ಯ 2.5 ಕೋಟಿಗೂ ಅಧಿಕ

Published

on

– ಸಾಮಾನ್ಯ ವಿದ್ಯಾರ್ಥಿಗಳ ಅಸಾಮಾನ್ಯ ಸಾಧನೆ

ಲವೊಂದಿದ್ದರೆ ಏನು ಬೇಕಾದ್ರೂ ಮಾಡಬಹುದು. ಛಲಗಾರನಿಗೆ ಅಸಾಧ್ಯವಾದದ್ದು ಸರಳವಾಗುತ್ತೆ. ಅಂತಹ ಇಬ್ಬರು ಯುವಕರ ಸ್ಫೂರ್ತಿದಾಯಕದ ಸಾಧನೆ ಕಥೆ ಇಲ್ಲಿದೆ. ಕೇವಲ 15 ಸಾವಿರ ರೂ.ದಲ್ಲಿ ಸ್ಟಾರ್ಟ್ ಅಪ್ ಆರಂಭಿಸಿದ್ದ ಯುವಕರಿಗೆ ನಾಲ್ಕು ತಿಂಗಳಲ್ಲಿ 15 ಲಕ್ಷ ರೂ. ಫಂಡಿಂಗ್ ಸಿಕ್ಕಿದ್ದು, ಸದ್ಯ ಕಂಪನಿಯ ಮೌಲ್ಯ ಎರಡೂವರೆ ಕೋಟಿಗೂ ಅಧಿಕ.

22 ವರ್ಷದ ರಿಷಬ್ ಮತ್ತು 21 ವರ್ಷದ ಲಕ್ಕಿ ರೊಹಿಲ್ಲಾ ಇಬ್ಬರು ಕುರುಕ್ಷೇತ್ರದ ಎನ್‍ಐಟಿಯ ಫೈನಲ್ ಇಯರ್ ವಿದ್ಯಾರ್ಥಿಗಳು. ಕಾಲೇಜಿನ ಎರಡನೇ ವರ್ಷದಲ್ಲಿ ಇಬ್ಬರು ಜೊತೆಗೂಡಿ ಒಂದು ಆ್ಯಪ್ ಡೆವಲಪ್ ಮಾಡಿದ್ದರು. ಆದ್ರೆ ಹೆಚ್ಚು ಬಳಕೆಯಾಗದ ಹಿನ್ನೆಲೆ ನಾಲ್ಕು ತಿಂಗಳಲ್ಲೇ ಆ್ಯಪ್ ಕ್ಲೋಸ್ ಮಾಡಲಾಯ್ತು. ಮೂರನೇ ವರ್ಷದಲ್ಲಿ ಆರು ತಿಂಗಳು ಇಂಟರ್ನ್ ಶಿಪ್ ಬಂದಿತ್ತು. ಈ ಸೆಮಿಸ್ಟರ್ ನಲ್ಲಿ ಹೆಚ್ಚು ಓದೋದು ಇರಲ್ಲ. ಹಾಗಾಗಿ ಲಕ್ಕಿ ಹಾಗೂ ರಿಷಬ್ ತಮ್ಮದೇ ಹೊಸ ಸ್ಟಾರ್ಟ್ ಅಪ್ ಆರಂಭಿಸುವ ಕುರಿತು ಪ್ಲಾನ್ ಮಾಡತೊಡಗಿದರು. 2020 ಮಾರ್ಚ್ ನಲ್ಲಿ ಕೆಲವು ಐಡಿಯಾಗಳ ಕೆಲಸ ಮಾಡಲು ಆರಂಭಿಸಿದ ಗೆಳೆಯರು ಕೆಲವೇ ದಿನಗಳಲ್ಲಿ quantel.in (ಕ್ವಾಂಟೆಲ್.ಇನ್) ಹೆಸರಿನ ಪ್ಲಾಟ್‍ಫಾರಂ ನಿರ್ಮಿಸಿದರು. ಈ ವೇದಿಕೆಯಲ್ಲಿ ತಜ್ಞರ ಜೊತೆ ವಿದ್ಯಾರ್ಥಿಗಳು ಫೇಸ್ ಟು ಫೇಸ್ ಮಾತಾಡಬಹುದು. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಮತ್ತು ತಜ್ಞರಿಂದ ನೇರವಾಗಿ ಭವಿಷ್ಯದ ಕುರಿತ ಸಲಹೆಗಳನ್ನ ಪಡೆಯಬಹುದಾಗಿದೆ.

ಹೂಡಿಕೆ ಮಾಡಿದ್ದು 15 ಸಾವಿರ ರೂಪಾಯಿ!: ಹೌದು ರಿಷಬ್ ಮತ್ತು ಲಕ್ಕಿ ಆ್ಯಡ್‍ಟೆಕ್ ಸ್ಟಾರ್ಟ್ ಅಪ್‍ಗಾಗಿ ಆರಂಭದಲ್ಲಿ 15 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದರು. ಕಂಪನಿಯ ನೋಂದಣಿಗಾಗಿ ತಮ್ಮ ಸೇವಿಂಗ್ಸ್ ಹಣ ಬಳಸಿದ್ದರು. ಸ್ಟಾರ್ಟ್ ಅಪ್ ಆರಂಭಿಸಿದ ನಾಲ್ಕು ತಿಂಗಳಲ್ಲಿಯೇ ಕ್ಯಾಲಿಫೋರ್ನಿಯಾದ ಕಂಪನಿ ಬಂಡವಾಳ ಹೂಡಿಕೆಗೆ ಮುಂದೆ ಬಂದು 15 ಲಕ್ಷ ರೂ. ಫಂಡಿಂಗ್ ಮಾಡಿದೆ. ಸದ್ಯ ಋಷಬ್ ಮತ್ತು ಲಕ್ಕಿ ಕಂಪನಿಯ ಒಟ್ಟು ಮೌಲ್ಯ 2.5 ಕೋಟಿ ರೂ.ಗೆ ತಲುಪಿದೆ.

ತಜ್ಞರಿಂದ ಸಲಹೆ, ಮಾರ್ಗಸೂಚಿ, ಆಯ್ಕೆಯ ಮಾಹಿತಿ: 12ನೇ ತರಗತಿ ಬಳಿಕ ಪದವಿಯಲ್ಲಿ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು? ಪದವಿ ನಂತರ ಏನು ಮತ್ತು ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳು ಪಡೆದುಕೊಳ್ಳುವ ತರಬೇತಿಯ ಗುಣಮಟ್ಟ ಹೇಗಿರಬೇಕು ಎಂಬಿತ್ಯಾದಿ ಎಲ್ಲ ಪ್ರಶ್ನೆಗಳಿಗೆ ನಮ್ಮ ಕ್ವಾಂಟೆಲ್.ಇನ್ ಉತ್ತರ ನೀಡುತ್ತದೆ ಎಂದು ರಿಷಬ್ ಹೇಳ್ತಾರೆ. ಕ್ವಾಂಟೆಲ್ ವೇದಿಕೆಯಲ್ಲಿ ಬೇರೆ ಬೇರೆ ಕ್ಷೇತ್ರದ ತಜ್ಞರನ್ನ ನೇರವಾಗಿ ಸಂಪರ್ಕಿಸಿ ಸಲಹೆ ಪಡೆಯಬಹುದು. ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆಯಿಲ್ಲದೇ ನೇರವಾಗಿ ಪ್ರಶ್ನೆ ಕೇಳಬಹುದಾಗಿದೆ. ನಿಮ್ಮ ಶಿಕ್ಷಣ, ಉದ್ಯೋಗ ಮತ್ತು ಭವಿಷ್ಯದ ಕುರಿತ ಪ್ರಶ್ನೆಗಳನ್ನ ಕೇಳಿ ವಿದ್ಯಾರ್ಥಿಗಳು ಉತ್ತರ ಪಡೆದುಕೊಳ್ಳಬಹುದು ಎಂದು ಹೇಳ್ತಾರೆ ರಿಷಬ್.

200 ರೂ. ಪಾವತಿಸಿ ಉತ್ತರ ಕಂಡುಕೊಳ್ಳಿ: ಕ್ವಾಂಟೆಲ್ ಪ್ಲಾಟ್‍ಫಾರಂನಲ್ಲಿರುವ ತಜ್ಞರ ಮಾಹಿತಿ ನೀಡಲಾಗಿರುತ್ತದೆ. ಪ್ರತಿ ತಜ್ಞರ ಕ್ಷೇತ್ರ, ಅನುಭವವನ್ನ ಅವರ ಪ್ರೊಫೈಲ್ ನಲ್ಲಿ ತಿಳಿಸಲಾಗಿರುತ್ತದೆ. ವಿದ್ಯಾರ್ಥಿಗಳೇ ತಮ್ಮ ಸಮಸ್ಯೆಗೆ ಯಾರಿಂದ ಪರಿಹಾರ ಸಿಗುತ್ತೆ ಅಂತ ನಿರ್ಧರಿಸಬಹುದು. ವಿದ್ಯಾರ್ಥಿಗಳಿಗೆಯೇ ತಜ್ಞರನ್ನ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಲಾಗುತ್ತದೆ. 30 ರಿಂದ 40 ನಿಮಿಷ ವರ್ಚುವಲ್ ಸೆಷನ್ ಏರ್ಪಡಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರತಿ ಸೆಷನ್ ಗೆ 200 ರೂಪಾಯಿ ಪಾವತಿಸಬೇಕು. ಅತ್ಯಧಿಕ ಶುಲ್ಕವೇ ಆರು ನೂರು ರೂಪಾಯಿ ಇದೆ.

ತಜ್ಞರ ಜೊತೆಗೆ ನೇರವಾಗಿ ಮಾತನಾಡಲು ಯಾವುದೇ ಕಂಪನಿ ನಮಗಿಂತ ಕಡಿಮೆ ಮೊತ್ತ ಚಾರ್ಜ್ ಮಾಡಲಾರದು. ಸದ್ಯ ಅತಿ ಕಡಿಮೆ ಶುಲ್ಕಕ್ಕೆ ಸೇವೆಯನ್ನ ನೀಡಲಾಗುತ್ತಿದೆ. ಇದುವರೆಗೂ ಕಾಲೇಜು ಮತ್ತು ವಿಶ್ವವಿದ್ಯಾಲಯದ ಸುಮಾರು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿ ನಮ್ಮ ವೇದಿಕೆ ತಲುಪಿದ್ದಾರೆ ಎಂದು ರಿಷಬ್ ಸಂತೋಷ ವ್ಯಕ್ತಪಡಿಸಿದ್ದಾರೆ. ಅವಶ್ಯವಿರುವ ಎಲ್ಲ ವಿದ್ಯಾರ್ಥಿಗೂ ಸೂಕ್ತ ಮಾರ್ಗದರ್ಶನ ಸಿಗಬೇಕು ಎಂಬುವುದು ನಮ್ಮ ಸ್ಟಾರ್ಟ್ ಅಪ್ ಉದ್ದೇಶ ಎಂದು ಹೇಳ್ತಾರೆ ಲಕ್ಕಿ. ಸದ್ಯ ಟಯರ್-1, 2 ಮತ್ತು ಮೂರನೇ ಹಂತದ ನಗರಗಳ ವಿದ್ಯಾರ್ಥಿಗಳತ್ತ ನಮ್ಮ ಗಮನವಿದೆ. ವ್ಯವಹಾರ ಒಂದೆಡೆ ಇರಬಹುದು, ನಮ್ಮ ಸ್ಟಾರ್ಟ್ ಅಪ್ ಮೂಲಕ ಸೋಶಿಯಲ್ ಇಂಪ್ಯಾಕ್ಟ್ ಕ್ರಿಯೇಟ್ ಮಾಡಲು ಪ್ರಯತ್ನಿಸುತ್ತಿದ್ದೇವೆ. ಕೈಗೆಟುಕುವ ದರದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮತ್ತು ಮೆಂಟರ್ ಶಿಪ್ ಸಿಗುವಂತಾಗಬೇಕು ಎಂದು ಸ್ಟಾರ್ಟ್ ಅಪ್ ಆರಂಭದ ಉದ್ದೇಶವನ್ನ ಲಕ್ಕಿ ತಿಳಿಸಿದರು.

ಬಂಡವಾಳ ಹೂಡಿಕೆಗೆ 35 ಹೂಡಿಕೆದಾರರು ಹಿಂದೇಟು: ಸ್ಟಾರ್ಟ್ ಅಪ್ ಆರಂಭಿಸಿದ ಬಳಿಕ ಲಕ್ಕಿ ಮತ್ತು ರಿಷಬ್ ಫಂಡಿಂಗ್ ಗಾಗಿ ಇನ್ವೆಸ್ಟರ್ಸ್ ಗಳನ್ನ ಹುಡುಕಾಡಿದ್ದಾರೆ. ನೀವಿನ್ನೂ ಕಾಲೇಜಿನ ವಿದ್ಯಾರ್ಥಿಗಳು. ಒಂದು ದಿನದ ಜೋಶ್ ಕೆಲವೇ ದಿನಗಳಲ್ಲಿ ಮುಗಿದು ಹೋಗುತ್ತೆ ಎಂದು 35 ಹೂಡಿಕೆದಾರರು ಫಂಡಿಂಗ್ ಮಾಡಲು ಮುಂದೆ ಬರಲಿಲ್ಲ. ಆದ್ರೆ 36ನೇ ಹೂಡಿಕೆದಾರರಿಗೆ ರಿಷಬ್ ಮತ್ತು ಲಕ್ಕಿಯ ಐಡಿಯಾ ಇಷ್ಟವಾಗಿದೆ. ನಮ್ಮ ಇನ್ವೆಸ್ಟರ್ ದೆಹಲಿಯಲ್ಲಿಯೇ ಶಿಕ್ಷಣ ಪಡೆದಿದ್ದು, ಉದ್ಯೋಗ ಅರಸಿ ಯುಎಸ್ ಗೆ ತೆರಳಿದ್ದು, ಅಲ್ಲಿಯೇ ಸೆಟಲ್ ಆಗಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿರುವ ಅವರು ಅಲ್ಲಿಂದಲೇ 15 ಲಕ್ಷ ರೂ. ಫಂಡಿಂಗ್ ಮಾಡಿದರು. ಇದೇ ಹಣದಿಂದ ಪ್ರೊಜೆಕ್ಟರ್, ಮಾರ್ಕೆಟ್ ಖರ್ಚು, ನೌಕರರ ಸಂಬಳ, ಪೀಠೋಪಕರಣ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನ ಮಾಡಿಕೊಳ್ಳಲಾಯ್ತು ಎಂದು ಲಕ್ಕಿ ಕಂಪನಿ ಆರಂಭದಲ್ಲಿ ಎದುರಾದ ಸವಾಲುಗಳನ್ನ ಹಂಚಿಕೊಂಡರು.

ರಿಷಬ್ ಮತ್ತು ಲಕ್ಕಿ ಒಂದೇ ಕೋಚಿಂಗ್ ಸೆಂಟರ್ ನಿಂದ ಜೆಇಇ ಯ ತಯಾರಿ ನಡೆಸಿದ್ದರು. ಆದ್ರೆ ಅಲ್ಲಿ ಇಬ್ಬರಿಗೂ ಪರಿಚಯವಿರಲಿಲ್ಲ. ಕುರುಕ್ಷೇತ್ರದ ಎನ್‍ಐಟಿಯಲ್ಲಿ ರಿಷಬ್ ಮೆಕ್ಯಾನಿಕಲ್ ಇಂಜಿನೀಯರಿಂಗ್ ಬ್ರ್ಯಾಂಚ್ ಮತ್ತು ಲಕ್ಕಿ ಸಿವಿಲ್ ಇಂಜಿನೀಯರಿಂಗ್ ಬ್ರ್ಯಾಂಚ್ ಸೇರಿಕೊಂಡಿದ್ದರು. ಒಂದೇ ಕಾಲೇಜಿನಲ್ಲಿ ಓದುತ್ತಿದ್ದರಿಂದ ಇಬ್ಬರ ಸ್ನೇಹ ಬೆಳೆದಿತ್ತು. ಇಬ್ಬರ ಆಲೋಚನೆಗಳು ಒಂದೇ ಆಗಿದ್ದರಿಂದ ರಿಷಬ್ ಮತ್ತು ಲಕ್ಕಿ ಸ್ನೇಹ ಗಾಢವಾಗಿತ್ತು. ಯಾವುದೋ ಕಂಪನಿಯಲ್ಲಿ ನೌಕರನಾಗಿ ಕೆಲಸ ಮಾಡುವ ಬದಲಾಗಿ ಇಬ್ಬರು ತಮ್ಮದೇ ಬ್ಯುಸಿನೆಸ್ ಆರಂಭಿಸಬೇಕೆಂದು ಪ್ಲಾನ್ ಮಾಡಿಕೊಂಡಿದ್ದರು.

ಹೊಸ ಬ್ಯುಸಿನೆಸ್ ಆರಂಭಕ್ಕೂ ಇಬ್ಬರ ಕುಟುಂಬಸ್ಥರು ಸಪೋರ್ಟ್ ಮಾಡಿದ್ದಾರೆ. ನಂತರ ಕಾಲೇಜಿನ ಕ್ಯಾಂಪಸ್ ನಲ್ಲಿಯೇ ಕುಳಿತು ತಮ್ಮ ಸ್ಟಾರ್ಟ್ ಅಪ್ ಹೇಗಿರಬೇಕು? ಫಂಡಿಂಗ್, ಕಚೇರಿ, ಉದ್ಯೋಗಿಗಳ ಆಯ್ಕೆ ಸೇರಿದಂತೆ ಎಲ್ಲ ವಿಷಯಗಳ ಕುರಿತು ಚರ್ಚೆ ನಡೆಸಿ, ಕ್ವಾಂಟೆಲ್ ಪ್ಲಾಟ್‍ಫಾರಂ ಸೆಟಪ್ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ.

ಸದ್ಯ 24 ಜನರ ಟೀಂ, ಎಲ್ಲರೂ 18ರಿಂದ 22 ವಯಸ್ಸಿನವರೇ: ಇಬ್ಬರಿಂದ ಆರಂಭವಾದ ತಂಡದಲ್ಲಿ ಸದ್ಯ 24 ಜನರಿದ್ದಾರೆ. ಕೋರ್ ಟೀಂನಲ್ಲಿ ಎಂಟು ಜನ ಮತ್ತು 15 ಇಂಟರ್ನ್ ಗಳಿದ್ದಾರೆ. ರಿಷಬ್, ಆತನಿಬ್ಬರು ಗೆಳೆಯರೇ 22 ವರ್ಷದವರು. ಡಿಸೈನಿಂಗ್ ಕೆಲಸ ಮಾಡುವ ಉದ್ಯೋಗಿಯ ವಯಸ್ಸು 18 ವರ್ಷ. 24 ಜನರು 18 ರಿಂದ 22 ವಯಸ್ಸಿನ ಒಂದೇ ವಯೋಮಾನದವರು ಎಂಬುವುದು ಮತ್ತೊಂದು ವಿಶೇಷ.

ಲಕ್ಕಿಗೆ 2019ರಲ್ಲಿ ಬಿಡುಗಡೆಯಾದ ಅಪ್‍ ಸ್ಟಾರ್ಟ್ಸ್ ಸಿನಿಮಾ ಪ್ರೇರಣೆಯಾದ್ರೆ, ರಿಷಬ್ ಗೆ ಸ್ಟಾರ್ಟ್ ಅಪ್ ಮತ್ತು ಮೋಟಿವೇಷನಲ್ ಕಂಪನಿಯ ಕಥೆಗಳನ್ನು ಓದೋದು ಇಷ್ಟ. ಓಯೋ ಫೌಂಡರ್ ರಿತೇಶ್ ಅಗರ್‍ವಾಲ್ ಯಶಸ್ಸಿನ ಕಥೆ ಸ್ಟಾರ್ಟ್ ಅಪ್ ಆರಂಭಿಸಲು ಪ್ರೇರಣೆ ನೀಡಿದೆ. ಇಬ್ಬರು ಟಿವಿಎಫ್ ವೆಬ್ ಸಿರೀಸ್ ಪೀಚರ್ಸ್ ನಿಂದ ಪ್ರಭಾವಿತರಾಗಿದ್ದಾರೆ.

Click to comment

Leave a Reply

Your email address will not be published. Required fields are marked *