Connect with us

Districts

ಚುನಾವಣೆ ನಂತ್ರ ಮಂಡ್ಯದಲ್ಲಿ ನಿಖಿಲ್ – ಮೃತ ಕಾರ್ಯಕರ್ತನ ನೆನೆದು ಭಾವುಕ

Published

on

ಮಂಡ್ಯ: ಲೋಕಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ನಿಖಿಲ್ ಜಿಲ್ಲೆಗೆ ಭೇಟಿ ನೀಡಿದ್ದು, ಅನಾರೋಗ್ಯದಿಂದ ಸಾವನ್ನಪ್ಪಿದ ಜೆಡಿಎಸ್ ಕಾರ್ಯಕರ್ತನ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ.

ಮಳವಳ್ಳಿಯ ಜೆಡಿಎಸ್ ಕಾರ್ಯಕರ್ತ ಸಂತೋಷ್ ಇತ್ತೀಚೆಗೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಮೃತ ಸಂತೋಷ್ ಮನೆಗೆ ಹೋಗಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಕುಟುಂಬಸ್ಥರೊಂದಿಗೆ ಮಾತನಾಡುತ್ತಾ ಸದಾ ಜೆಡಿಎಸ್ ಪಕ್ಷಕ್ಕಾಗಿ ದುಡಿದ ಮೃತ ಸಂತೋಷ್ ನೆನೆದು ನಿಖಿಲ್ ಭಾವುಕರಾದರು.

ನಿಖಿಲ್ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಕಾಲಿಗೆ ಬಿದ್ದು ನಮಸ್ಕರಿಸಲು ಮೃತ ಸಂತೋಷ ತಾಯಿ ಜಯಮ್ಮ ಮುಂದಾಗಿದ್ದರು. ಈ ವೇಳೆ ಕಾಲಿಗೆ ಬೀಳುತ್ತಿದ್ದನ್ನು ನಿಖಿಲ್ ತಡೆದು ಅವರಿಗೆ ಕೈ ಮುಗಿದು ನಮಸ್ಕರಿಸಿದ್ದಾರೆ.

ಇದೇ ವೇಳೆ ಮಾತನಾಡಿದ ನಿಖಿಲ್, ಸಂತೋಷ್ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರ ಸ್ವಂತ ದುಡಿಮೆಯಲ್ಲಿ ಮಳವಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಕಟ್ಟಲಿಕ್ಕೆ ಕೆಲಸ ಮಾಡಿದ್ದರು. ಸಂತೋಷ್ ಅಗಲಿಕೆ ಜೀರ್ಣಿಸಿಕೊಳ್ಳಲಿಕ್ಕೆ ಆಗುತ್ತಿಲ್ಲ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರಚಾರದ ವೇಳೆ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದರು ಎಂದು ಸಂತೋಷ್ ಅವರನ್ನು ನಿಖಿಲ್ ನೆನೆದರು.

ಮಕ್ಕಳನ್ನ ಕಳೆದುಕೊಂಡ ನೋವು ತಂದೆತಾಯಿಗೆ ಮಾತ್ರ ಗೊತ್ತಿರುತ್ತದೆ. ನಾವು ಏನೇ ಸಾಂತ್ವನ ಹೇಳಿದರೂ ಸಾಲುವುದಿಲ್ಲ. ಸಂತೋಷ್ ತಾಯಿಯ ಕಣ್ಣೀರು ಕಂಡಾಗ ನನಗೆ ದುಃಖ ತಡೆಯಲು ಸಾಧ್ಯವಾಗಿಲ್ಲ. ನನ್ನ ಕುಟುಂಬ ಸದಸ್ಯರನ್ನ ಕಳೆದುಕೊಂಡಷ್ಟೇ ನನಗೆ ನೋವಾಗಿದೆ. ಸಂತೋಷ್ ಕುಟುಂಬಸ್ಥರ ಜೊತೆ ನಾನು ಸದಾ ಇರುತ್ತೇನೆ. ನನ್ನನ್ನು ಅವರ ಮನೆ ಮಗನಂತೆ ಭಾವಿಸಲಿ ಎಂದು ನಿಖಿಲ್ ಹೇಳಿದರು.