Tuesday, 23rd April 2019

ನಿಖಿಲ್ ಕುಮಾರಸ್ವಾಮಿಗೆ ಶೀಘ್ರವೇ ಕಂಕಣ ಭಾಗ್ಯ?

ಚಿಕ್ಕಮಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯ ಮದುವೆ ಬಗ್ಗೆ ಶೃಂಗೇರಿ ಶ್ರೀಗಳೊಂದಿಗೆ ಚರ್ಚೆ ನಡೆಸುತ್ತೇನೆಂದು ಹೇಳಿದ್ದಾರೆ.

ಜಿಲ್ಲೆಯ ಸುಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬ ದೇವಾಲಯಕ್ಕೆ ಆಗಮಿಸಿರುವ ಎಚ್‍ಡಿಕೆ ಮಾಧ್ಯಮಗಳೊಂದಿಗೆ ಮಾತನಾಡಿ, ಗುರುಗಳ ಅಶೀರ್ವಾದ, ಶಾರದಾಂಬೆ ದರ್ಶನ ಪಡೆಯಲು ಬಂದಿದ್ದೇನೆ. ಕ್ಷೇತ್ರಕ್ಕೆ ಬಂದು ದೇವಿಯ ದರ್ಶನ, ಗುರುಗಳ ಆಶೀರ್ವಾದದಿಂದ ಹಲವಾರು ರೀತಿಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಂಡಿದ್ದೇನೆ. ಎಲ್ಲಾ ಒಳ್ಳೆಯ ಕಾರ್ಯಕ್ಕೂ ಗುರುಗಳ ಆಶೀರ್ವಾದ ಇರಬೇಕು. ಹೀಗಾಗಿ ಮಗ ನಿಖಿಲ್ ಕುಮಾರಸ್ವಾಮಿಯ ಮದುವೆ ವಿಷಯವನ್ನೂ ಸಹ ಶ್ರೀಗಳ ಬಳಿ ಚರ್ಚೆ ನಡೆಸುತ್ತೇನೆ. ಇಂದಿನ ಭೇಟಿಯಲ್ಲಿ ಮದುವೆ ವಿಚಾರಕ್ಕೆ ಗುರುಗಳ ಆಶೀರ್ವಾದ ಪಡೆಯುವ ಉದ್ದೇಶವನ್ನು ಹೊಂದಿದ್ದೇನೆಂದು ಹೇಳಿದ್ದಾರೆ.

ಈ ವೇಳೆ ಸುದ್ದಿಗಾರರು ಬಿಎಸ್‍ವೈ ಕೇರಳ ಭೇಟಿ ಹಿನ್ನೆಲೆ ಶೃಂಗೇರಿಗೆ ಭೇಟಿ ನೀಡಿದ್ದೀರಾ ಎಂದು ಪ್ರಶ್ನಿಸಿದಾಗ, ನಾವು ಕದ್ದು ಮುಚ್ಚಿ ವಾಮಾಚಾರ, ಯಾಗ ಮಾಡಿಸುವ ಪ್ರಶ್ನೆಯೇ ಇಲ್ಲ. ಆ ಉದ್ದೇಶದಿಂದ ಯಾಗ ನಡೆಸುತ್ತಿಲ್ಲ. ನಾವು ದೇವರನ್ನು ನಂಬಿದ್ದೇವೆ. ದೇವರ ಬಳಿ ಪ್ರಾರ್ಥನೆ ಮಾಡುತ್ತೇವೆ. ಈ ಬಾರಿಯ ಚಳಿಗಾಲದ ಅಧಿವೇಶನ ಸುಸೂತ್ರವಾಗಿ ನಡೆಯಬೇಕು. ಹೀಗಾಗಿ ತಾಯಿಯ ಆಶೀರ್ವಾದ ಪಡೆಯಲು ಬಂದಿದ್ದೇನೆ. ವಿಶೇಷ ಪೂಜೆ ಏನು ಇಲ್ಲ. ಶೃಂಗೇರಿ ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ, ಹಿಂದಿನಿಂದಲೂ ಸಂಬಂಧ ಹಾಗೂ ನಂಬಿಕೆ ಇದೆ. ಕ್ಷೇತ್ರಕ್ಕೆ ಬಂದರೆ ಸಮಸ್ಯೆ ಬಗೆಹರಿಯುತ್ತದೆನ್ನುವ ನಂಬಿಕೆ ಇದೆ ಎಂದು ಹೇಳಿದರು.

ಕಂಪ್ಲಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಏನಾದರೂ ಹೇಳಿಕೆ ನೀಡಲು ಸ್ವಾತಂತ್ರ್ಯವಿದೆ. ಅದಕ್ಕೆ ಸುಮ್ಮನೆ ಯಾಕೆ ತಲೆ ಕೆಡಿಸಿಕೊಂಡಿದ್ದೀರೆಂದು ತಿಳಿಸಿದರು.

ಶೃಂಗೇರಿಗೆ ಆಗಮಿಸುತ್ತಿದ್ದಂತೆ ಸಿಎಂ ನೇರವಾಗಿ ಶಾರದಾಂಬೆಯ ದರ್ಶನ ಪಡೆದುಕೊಂಡರು. ಬಳಿಕ ಶ್ರೀ ಮಠಕ್ಕೆ ತೆರಳಿ ಜಗದ್ಗುರು ಭಾರತೀತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಸಿಎಂ ಶುಕ್ರವಾರ ದೇವಾಲಯದಲ್ಲಿ ನಡೆಯುವ ಪ್ರತಿಶೂಲಿನಿ ಯಾಗದ ಪೂರ್ಣಾಹುತಿಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಚಳಿಗಾಲದ ಅಧಿವೇಶನ, ಆಪರೇಷನ್ ಕಮಲದ ಭೀತಿ ಹಾಗೂ ಸಚಿವ ಸಂಪುಟದ ಕಸರತ್ತು ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿಎಂ ಕುಮಾರಸ್ವಾಮಿಯವರಿಗೆ ಪತ್ನಿ ಅನಿತಾ ಕುಮಾರಸ್ವಾಮಿ, ಸಚಿವ ರೇವಣ್ಣ, ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರೂ ಸಾಥ್ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

 

Leave a Reply

Your email address will not be published. Required fields are marked *