Sunday, 18th August 2019

Recent News

ರೇವಣ್ಣ ಹೇಳಿಕೆಗೆ ಕ್ಷಮೆ ಕೋರಿದ ನಿಖಿಲ್

– ಮಗನ ರಾಜಕೀಯ ಹಾದಿ ಸುಗಮಗೊಳಿಸಲು ಮಂಡ್ಯಗೆ ಅನಿತಾ ಕುಮಾರಸ್ವಾಮಿ ಎಂಟ್ರಿ

ಮಂಡ್ಯ: ಲೊಕಸಭಾ ಚುನಾವಣೆಗೂ ಮುನ್ನವೇ ಮಂಡ್ಯ ರಾಜಕೀಯ ಬೆಳವಣಿಗೆಗಳು ರಾಜ್ಯದ ಗಮನ ಸೆಳೆದಿದ್ದು, ಈ ನಡುವೆ ಸಚಿವ ರೇವಣ್ಣ ಅವರು ಸುಮಲತಾ ಅವರ ಕುರಿತು ನೀಡಿದ್ದ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಕ್ಷಮೆ ಕೋರಿದ್ದಾರೆ.

ಇಂದು ಕ್ಷೇತ್ರದ ಚಿನಕುರಳಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರೇವಣ್ಣ ಅವರು ಯಾವ ಸಂದರ್ಭದಲ್ಲಿ, ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುವುದು ಗೊತ್ತಿಲ್ಲ. ಈ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಅವರು ಕ್ಷಮೆ ಕೇಳಿದ್ದಾರೆ. ಲೋಕಸಭೆ ಚುನಾವಣೆಯ ಅಭ್ಯರ್ಥಿಯಾಗಿ ನಾನೂ ಕೂಡ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದರು. ಅಲ್ಲದೇ ಇನ್ನು ಮುಂದೆ ನಮ್ಮ ಕಾರ್ಯಕರ್ತರೂ ಯಾರೂ ಹಾಗೆ ಮಾತನಾಡುವುದಿಲ್ಲ ಎಂಬ ಭರವಸೆಯನ್ನು ನೀಡಿದರು.

ರೇವಣ್ಣ ಹೇಳಿಕೆ ಬಗ್ಗೆ ರಾಯಚೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು, ಸುಮಲತಾ ಅವರ ಬಗ್ಗೆ ರೇವಣ್ಣ ಅವರು ನೀಡಿರುವ ಹೇಳಿಕೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ರಾಜ್ಯ ಸರ್ಕಾರದ ಪ್ರಮುಖ ಮಂತ್ರಿ ಬಾಯಲ್ಲಿ ಈ ರೀತಿಯ ಮಾತು ಹೇಳಬಾರದಿತ್ತು. ಅದ್ದರಿಂದ ಜೆಡಿಎಸ್ ಪಕ್ಷದ ರಾಜ್ಯಾಧಕ್ಷನಾಗಿ ರೇವಣ್ಣನ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದರು.

ಇಂದು ಬೆಳಗ್ಗೆ ಸಿಎಂ ಕುಮಾರಸ್ವಾಮಿ ಅವರು ಕೂಡ ಮಾಧ್ಯಮಗಳೊಂದಿಗೆ ಮಾತನಾಡಿ, ರೇವಣ್ಣ ಅವರು ಸುಮಲತಾ ಅವರ ವಿರುದ್ಧ ಮಾತನಾಡಿಲ್ಲ. ಅವರನ್ನು ಟೀಕಿಸಿಲ್ಲ. ರೇವಣ್ಣ ಬಳಿ ನಾನು ಈ ಬಗ್ಗೆ ಮಾತನಾಡಿ, ಯಾಕೆ ಈ ಹೇಳಿಕೆ ನೀಡಿದಿರಿ ಅಂತ ಕೇಳಿದ್ದೇನೆ. ಸುಮಲತಾ ಅವರು ಅಂಬರೀಶ್ ಅವರು ಅಗಲಿರುವ ನೋವಿನಲ್ಲಿದ್ದಾರೆ. ಈ ನಡುವೆ ರಾಜಕೀಯ ಬೇಡವಾಗಿತ್ತು ಎನ್ನುವ ದೃಷ್ಟಿಯಲ್ಲಿ ಹೇಳಿದ್ದು ಅಷ್ಟೆ. ಆದರೆ ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು. ರೇವಣ್ಣ ಅವರ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅವರ ಪರವಾಗಿ ಕ್ಷಮೆ ಕೇಳುತ್ತೇನೆ. ನಮ್ಮದು ಮಹಿಳೆಯರಿಗೆ ಗೌರವ ಕೊಡುವ ಕುಟುಂಬ. ಯಾವ ಹೆಣ್ಣು ಮಕ್ಕಳಿಗೂ ನಾವು ಅವಮಾನ ಮಾಡಿಲ್ಲ ಎಂದು ಕ್ಷಮೆಯಾಚಿಸಿದ್ದರು.

ಇತ್ತ ಮಗನ ರಾಜಕೀಯ ಪ್ರವೇಶದ ಹಾದಿಯನ್ನು ಸುಗಮಗೊಳಿಸಲು ಮುಂದಾಗಿರುವ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಇಂದು ಪುತ್ರನೊಂದಿಗೆ ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಮಾಜಿ ಶಾಸಕಿ, ರವೀಂದ್ರ ಅವರ ತಾಯಿ ಪಾರ್ವತಮ್ಮ ಶ್ರೀಕಂಠಯ್ಯ ಅವರೊಂದಿಗೆ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *