Sunday, 22nd September 2019

ಸಂವಿಧಾನವಿಲ್ಲದ್ದರೆ ನಮ್ಮಂತ ಸ್ವಾಮಿಗಳನ್ನು ಗುಂಡಿಕ್ಕಿ ಹತ್ಯೆ ಮಾಡುತ್ತಿದ್ದರು: ನಿಜಗುಣಾನಂದ ಶ್ರೀಗಳು

ಧಾರವಾಡ: ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವೇ ನಮ್ಮಂತಹ ಸ್ವಾಮೀಜಿಗಳಿಗೆ ಮಾತನಾಡಲು ಅವಕಾಶ ಕಲ್ಪಿಸಿದೆ. ಇಲ್ಲದೆ ಹೋಗಿದ್ದರೆ ನಮ್ಮನ್ನ ಗುಂಡಿಕ್ಕಿ ಹತ್ಯೆಗೈಯುತ್ತಿದ್ದರು ಎಂದು ಮುಂಡರಗಿ ಮಠದ ನಿಜಗುಣಾನಂದ ಶ್ರೀಗಳು ಹೇಳಿದ್ದಾರೆ.

ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ಅಂಬೇಡ್ಕರ್ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ತುಪ್ಪ ತಿಂದವರಿಂದ ದೇಶ ಹಾಳಾಗಿದೆಯೇ ಹೊರತು ಮಾಂಸ ತಿಂದವರಿಂದಲ್ಲ ಅಂತ ನಾನು ಅನೇಕ ಬಾರಿ ಹೇಳಿದ್ದೇನೆ. ಹಾಗಂತ ನಾನು ಬ್ರಾಹ್ಮಣ ವಿರೋಧಿಯಲ್ಲ. ನಾನು ಹೇಳಿದ ರೀತಿಯೇ ಬೇರೆ, ಜನ ತಿಳಿದುಕೊಂಡಿದ್ದೇ ಬೇರೆ. ಬ್ರಾಹ್ಮಣರು ಅಂದರೆ ಕೆಟ್ಟವರು ಎನ್ನುವ ವಿಚಾರ ಮಾಡಬಾರದು ಎಂದು ತಿಳಿಸಿದರು.

ಬ್ರಾಹ್ಮಣರಾಗಿದ್ದ ವಿಶ್ವ ಗುರು ಬಸವಣ್ಣ, ಕ್ಷತ್ರೀಯನಾಗಿದ್ದ ಬುದ್ಧ ಹಾಗೂ ದಲಿತರಾಗಿದ್ದ ಬಿ.ಆರ್.ಅಂಬೇಡ್ಕರ್ ಅವರು ಸಮಾಜ ಸುಧಾರಣೆಯ ಕೆಲಸ ಮಾಡಿದರು. ಹೀಗಾಗಿ ಜಾತಿಯನ್ನು ನಾನು ವಿರೋಧ ಮಾಡುತ್ತಿಲ್ಲ. ಕೆಲವು ಮತೀಯ ವಾದಿಗಳು, ಪಟ್ಟಭದ್ರ ಹಿತಾಸಕ್ತಿಗಳು ಜಾತಿ ವಿರೋಧ ಕೆಲಸ ಮಾಡುತ್ತಿವೆ. ಈ ದೇಶದಲ್ಲಿ ಪ್ರಶ್ನೆ ಕೇಳುವವರು ಅಪರಾಧಿಗಳಾಗುತ್ತಾರೆ. ಗುಲಾಮಗಿರಿಯಲ್ಲಿ ಜನರು ಜೀನವ ನಡೆಸಬೇಕು ಎನ್ನುವುದು ಕೆಲಸ ಉದ್ದೇಶವಾಗಿದೆ ಎಂದು ದೂರಿದರು.

ಪ್ರಸಾದದಲ್ಲಿ ವಿಷ ಹಾಕಿ ನನ್ನನ್ನು ಕೊಲೆ ಮಾಡುತ್ತಾರೆ ಎನ್ನುವ ಭಯವಿದೆ. ಹೀಗಾಗಿ ನಾನು ಬಹಳ ಕಡೆಗಳಲ್ಲಿ ಪ್ರಸಾದ ಸ್ವೀಕರಿಸುವುದಿಲ್ಲ. ಇಂತಹ ಭಯದ ಸ್ಥಿತಿಯಲ್ಲಿ ನಾನು ಕಾಲ ಕಳೆಯುತ್ತಿರುವೆ. ನಾನು ಎಂದಿಗೂ ಬ್ರಾಹ್ಮಣರನ್ನು ಬೈಯ್ಯಲ್ಲ. ಅವರನ್ನು ಬೈದರೆ ಅದು ನಮ್ಮ ದೇಶದಲ್ಲಿ ಅಪರಾಧ ಎಂದ ಸ್ವಾಮೀಜಿ ಭಾಷಣದ ಉದ್ದಕ್ಕೂ ನಾನು ಬ್ರಾಹ್ಮಣರನ್ನು ಬೈಯಲ್ಲ ಅಂತ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *