Connect with us

Corona

ನಮ್ಮ ಅನ್ನದ ಪಾಲು ನಮ್ಗೆ ಕೊಡಿ, ಶೋಕಾಸ್ ನೋಟಿಸ್‍ಗೆ ಬಗ್ಗಲ್ಲ – ಎನ್‍ಎಚ್‍ಎಂ ಸಿಬ್ಬಂದಿ ಆಕ್ರೋಶ

Published

on

ಉಡುಪಿ: ಕೊರೊನಾ ಸಾಂಕ್ರಾಮಿಕ ರೋಗದ ನಡುವೆಯೇ ರಾಜ್ಯಾದ್ಯಂತ 30 ಸಾವಿರ ಮಂದಿ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‍ಎಚ್‍ಎಂ) ಸಿಬ್ಬಂದಿ ಕಳೆದ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಗಮನವನ್ನೇ ಕೊಡದೆ ಅಸಡ್ಡೆ ಮೆರೆಯುತ್ತಿದೆ.

ಉಡುಪಿ ಜಿಲ್ಲೆಯಲ್ಲಿ 512 ಜನ ಎನ್‍ಎಚ್‍ಎಂ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ವರ್ಷದಿಂದ ಮುಷ್ಕರ, ಹೋರಾಟ, ಅಸಹಕಾರ ಚಳುವಳಿ ಮಾಡುತ್ತಿದ್ದೇವೆ. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಷನಲ್ ಹೆಲ್ತ್ ಮಿಷನ್ ಜಿಲ್ಲಾಧ್ಯಕ್ಷ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಗಲಿರುಳು ಕೊರೊನಾ ವಾರಿಯರ್ಸ್ ಗಳಾಗಿ ನಾವು ದುಡಿಯುತ್ತಿದ್ದೇವೆ. ಹೊರ ಗುತ್ತಿಗೆ ನೌಕರರಿಗೆ ಅತೀ ಹೆಚ್ಚು ಪಾಸಿಟಿವ್ ಬಂದಿದೆ. ಕಾಲ್ ಸೆಂಟರ್, ಗಡಿ ಪ್ರದೇಶದಲ್ಲಿ ಹಗಲಿರುಳು ಕೆಲಸ ಮಾಡಿದರೂ ನಮ್ಮನ್ನು ಗುರುತಿಸುವವರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜೂನ್ ತಿಂಗಳಲ್ಲಿ ರಾಜ್ಯ ಸಂಘ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೆವು. ಗೌರವಾಧ್ಯಕ್ಷ ಆಯನೂರು ಮಂಜುನಾಥ್ ನೇತೃತ್ವದಲ್ಲಿ ಮಾತುಕತೆ ಆಗಿತ್ತು. ಸರ್ಕಾರ ಸಮಯ ಕೇಳಿದ್ದಕ್ಕೆ ಪ್ರತಿಭಟನೆ ಹಿಂದಕ್ಕೆ ತೆಗದುಕೊಂಡಿದ್ದೆವು ಎಂದರು.

ರಾಜ್ಯದ 30,000 ಎನ್‍ಎಚ್‍ಎಂ ಸಿಬ್ಬಂದಿ ಸೆಪ್ಟೆಂಬರ್ 24 ರಿಂದ ಮನೆಯಲ್ಲಿ ಇದ್ದಾರೆ. ಸರ್ಕಾರ ಶೋಕಾಸ್ ನೋಟಿಸ್ ಕೊಟ್ಟಿದೆ. ನಾವು ಇಂತಹ ನೋಟಿಸ್ ಗಳಿಗೆ ಬಗ್ಗುವುದಿಲ್ಲ. ನಮ್ಮ ಅನ್ನದ ಪಾಲು ನಮಗೆ ಕೊಡಿ ಎಂಬ ಹೆಸರಲ್ಲಿ ಅಭಿಯಾನ ನಡೆಯುತ್ತಿದೆ.

ಸಮಾನ ಸಂಭಾವನೆ, ಕನಿಷ್ಠ ವೇತನ, ಬೋನಸ್ ಕಾಯ್ದೆ ಯಾವುದನ್ನೂ ಸರ್ಕಾರ ಪಾಲಿಸುತ್ತಿಲ್ಲ. ಬೀದಿಗಿಳಿಯದೆ ಮನೆಯಲ್ಲೇ ಕುಳಿತು ಅಸಹಕಾರ ಚಳುವಳಿ ಮಾಡುತ್ತಿದ್ದೇವೆ. ಶಿಕ್ಷಣ ಆರೋಗ್ಯ ಬಹಳಷ್ಟು ಮುಖ್ಯ. ನಮ್ಮ ಬೇಡಿಕೆ ನ್ಯಾಯಯುತ ಸಂವಿಧಾನ ಬದ್ಧವಾಗಿದೆ. ಹೋರಾಟ ಉಗ್ರ ರೂಪಕ್ಕೆ ಬದಲಾಗುವ ಬದಲು ಬೇಡಿಕೆ ಈಡೇರಿಸಿ ಎಂದು ಸಂಘಟನೆ ಮುಖಂಡ ಗಿರೀಶ್ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಗುರುರಾಜ್, ರೂಪಕ್ ನಾಗರಾಜ್, ಗಿರೀಶ್, ರೇಷ್ಮಾ ಪೈ ಇದ್ದರು.

Click to comment

Leave a Reply

Your email address will not be published. Required fields are marked *