Crime
ಪತಿಯ ಮನೆಯವರಿಂದ ಕಿರುಕುಳ – ನವ ವಿವಾಹಿತೆ ನೇಣಿಗೆ ಶರಣು

ಧಾರವಾಡ: ಪತಿ ಮನೆಯವರ ಕಿರುಕುಳದಿಂದ ಮನನೊಂದ ನವ ವಿವಾಹಿತೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ.
ರಂಜಿತಾ ಹಂಚಿನಮನಿ (19) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿಗೆ ಆಕೆಯ ಪತಿಯ ಮನೆಯವರೇ ಕಾರಣ ಎಂದು ರಂಜಿತ ಪೋಷಕರು ಆರೋಪ ಮಾಡುತ್ತಿದ್ದಾರೆ.
ಕಳೆದ ಡಿಸೆಂಬರನಲ್ಲಿ ಧಾರವಾಡ ಜಿಲ್ಲೆಯ ತರ್ಲಘಟ್ಟ ಗ್ರಾಮದ ರಂಜಿತಾ ಮುಮ್ಮಿಗಟ್ಟಿ ಗ್ರಾಮದ ಮಂಜುನಾಥ ಜೊತೆ ಮದುವೆ ಮಾಡಲಾಗಿತ್ತು. ಆಗಿನಿಂದಲೇ ರಂಜಿತಾಗೆ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತಿದ್ದರು. ಗಂಡನ ಮನೆಯವರು ಆಕೆಯನ್ನು ನೇಣು ಹಾಕಿ ಕೊಲೆ ಮಾಡಿದ್ದಾರೆ ಎಂದು ರಂಜಿತಾ ಪೋಷಕರು ಆರೋಪಿಸಿದ್ದಾರೆ.
ರಂಜಿತಾ ನಿನ್ನಯಷ್ಟೇ ಪೋಷಕರಿಗೆ ಕರೆ ಮಾಡಿ ಮನೆಗೆ ವಾಪಸ್ ಕರೆದುಕೊಂಡು ಹೋಗಲು ಹೇಳಿದ್ದಳು. ಆದರೆ ಪತಿ ಮಂಜುನಾಥ ರಂಜಿತಾಳನ್ನು ಕಳಿಸಿರಲಿಲ್ಲ. ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ರಂಜಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಸದ್ಯ ಗರಗ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
