Connect with us

Bengaluru City

ಡಿ.31ರಂದು ರಾತ್ರಿ 8ರಿಂದ ಆಯ್ದ ರಸ್ತೆಗಳಲ್ಲಿ ವಾಹನ ಓಡಾಟಕ್ಕೆ ನಿರ್ಬಂಧ – ಹೋಟೆಲ್ ಟಿಕೆಟ್ ಇದ್ರೆ ಮಾತ್ರ ಅವಕಾಶ

Published

on

– ಕುಡಿದು ವಾಹನ ಚಲಿಸುವವರಿಗೆ ರಕ್ತ ತಪಾಸಣೆ
– ನಗರದ ಸುತ್ತ ನಾಕಾಬಂದಿ, ಹೊರಗೆ ತೆರಳದಂತೆ ಕ್ರಮ

ಬೆಂಗಳೂರು: ರಾತ್ರಿ ಕರ್ಫ್ಯೂ ವಿವಾದದ ಬಳಿಕ ಇದೀಗ ಪೊಲೀಸರು ಎಚ್ಚೆತ್ತುಕೊಂಡಿದ್ದು, ಹೊಸ ವರ್ಷದ ಅಂಗವಾಗಿ ಅನಗತ್ಯ ತಿರುಗಾಟಕ್ಕೆ ಬ್ರೇಕ್ ಹಾಕಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಡಿ.31ರ ರಾತ್ರಿ 8 ಗಂಟೆಯಿಂದಲೇ ಆಯ್ದ ರಸ್ತೆಗಳಲ್ಲಿ ವಾಹನ ಓಡಾಟ ನಿರ್ಬಂಧಿಸಲಾಗುತ್ತಿದೆ.

ಹೊಸ ವರ್ಷದ ಆಚರಣೆ ಅಂಗವಾಗಿ ವಿವಿಧ ಕ್ರಮ ಕೈಗೊಂಡಿರುವ ಕುರಿತು ಸಂಚಾರಿ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಹೊಸ ವರ್ಷಕ್ಕೆ ಸಂಚಾರಿ ನಿಯಮ ಹಾಗೂ ಮಾರ್ಗಸೂಚಿಗಳ ಕುರಿತು ವಿವರಿಸಿದ್ದಾರೆ. ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಬೆಂಗಳೂರಿನಲ್ಲಿ ವಿಶೇಷ ಬಂದೋಬಸ್ತ್ ಗೆ ತೀರ್ಮಾನಿಸಲಾಗಿದೆ. ಕಳೆದ ವರ್ಷ ಕೇಂದ್ರ, ವಾಣಿಜ್ಯ ವಲಯಗಳಲ್ಲಿ ಜನಸಂದಣಿಗೆ ಅವಕಾಶ ಇರುತ್ತಿತ್ತು. ಈ ಬಾರಿ ಎಲ್ಲಿಯೂ ಹೊರಗಡೆ ಹಾಗೂ ರಸ್ತೆಯ ಮೇಲೆ ಆಚರಣೆಗೆ ಅವಕಾಶವಿಲ್ಲ ಎಂದು ಮಾಹಿತಿ ನೀಡಿದರು.

ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಮ್ಯೂಸಿಯಂ ರಸ್ತೆ, ಚರ್ಚ್ ಸ್ಟ್ರೀಟ್, ರೆಸ್ಟ್ ಹೌಸ್ ರಸ್ತೆಯಲ್ಲಿ ನಾಳೆ ರಾತ್ರಿ ಎಂಟು ಗಂಟೆಯಿಂದ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಾತ್ರಿ ಎಂಟು ಗಂಟೆಯ ಬಳಿಕ ಈ ರಸ್ತೆಯಲ್ಲಿ ವಾಹನಗಳಿಗೆ ಅವಕಾಶವಿಲ್ಲ. ಹೋಟೆಲ್‍ಗಳು ನೀಡಿರುವ ಪಾಸ್, ಟಿಕೆಟ್ ಇದ್ದರೆ ಮಾತ್ರ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮೇಲ್ಸೇತುವೆಗಳಲ್ಲಿ ಡ್ರ್ಯಾಗ್ ರೇಸ್, ವ್ಹೀಲಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಾತ್ರಿ 10 ಗಂಟೆಯ ನಂತರ ಎಲ್ಲ ಫ್ಲೈ ಓವರ್‍ಗಳನ್ನು ಬಂದ್ ಮಾಡಲಾಗುವುದು. ವಿಮಾನ ನಿಲ್ದಾಣ ರಸ್ತೆಯ ಎಲಿವೆಟೆಡ್ ಫ್ಲೈ ಓವರ್ ಸಹ ಬಂದ್ ಮಾಡಲಾಗುವುದು. ಮಾತ್ರವಲ್ಲದೆ ಹಲವಾರು ಮಾರ್ಗ ಬದಲಾವಣೆಗಳನ್ನು ಸಹ ಮಾಡಲಾಗಿದೆ ಎಂದರು.

15 ಕಡೆ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇನ್ಫೆಂಟ್ರಿ ರಸ್ತೆ, ಇಂದಿರಾನಗರ 100 ಫೀಟ್ ಸೇರಿದಂತೆ 15 ಕಡೆ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ. 668 ಕಡೆಗಳ ರಸ್ತೆಗಳಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ. ನೈಸ್ ರಸ್ತೆಯ ಮೇಲೂ ನಿಗಾ ವಹಿಸಲಾಗಿದೆ. 2,600 ಟ್ರಾಫಿಕ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ನಗರದ ಹೊರಗಡೆ ತೆರಳುವ ಎಲ್ಲ ಮಾರ್ಗಗಳಲ್ಲಿ ನಾಕಾಬಂದಿ ಹಾಕಲಾಗುವುದು. ಎರಡ್ಮೂರು ಬಾರಿ ಓಡಾಡಿದರೆ ರಿಜಿಸ್ಟರ್ ನಲ್ಲಿ ಎಂಟ್ರಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

191 ಚೆಕ್ ಪಾಯಿಂಟ್ ಗಳಲ್ಲಿ ಪೊಲೀಸಲು ವಾಹನ ತಪಾಸಣೆ ಮಾಡಲಿದ್ದಾರೆ. ಮದ್ಯ ಸೇವನೆ ಮಾಡಿ ತೆರಳುವವರ ಮೇಲೆ ನಿಗಾ ವಹಿಸಲಾಗುತ್ತದೆ. ಈ ಬಗ್ಗೆ ಹೋಟೆಲ್ ಗಳ ಮಾಲೀಕರ ಜೊತೆ ಮಾತುಕತೆ ನಡೆಸಲಾಗಿದೆ. ಯಾರಾದರೂ ಚಾಲಕರು ಮದ್ಯ ಸೇವನೆ ಮಾಡಿದರೆ ಮೊದಲಿಗೆ ಅವರಿಗೆ ತಿಳಿಸಲಾಗುತ್ತೆ. ಪಬ್ ಬಾರ್ ನವರು ಬೇರೆ ವ್ಯವಸ್ಥೆ ಮಾಡೋದಕ್ಕೆ ತಯಾರಿದ್ದಾರೆ. ಇದನ್ನು ಹೊರತುಪಡಿಸಿ ಓಲಾ ಉಬರ್ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದರು.

191 ಕಡೆ ಪೊಲೀಸ್ ಪಿಕ್ ಅಪ್ ಪಾಯಿಂಟ್ ಮಾಡಲಾಗಿದೆ. ಕುಡಿದವರನ್ನು ಪಿಕ್ ಮಾಡಿಕೊಂಡು ರಕ್ತ ಪರೀಕ್ಷೆಗೆ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್ ಇರುವುದರಿಂದ ಡಿಡಿ ಚೆಕ್ ಮಾಡುವುದಿಲ್ಲ. ಆದರೆ ಕುಡಿದು ವಾಹನ ಚಾಲನೆ ಮಾಡಿದರೆ ಕಾನೂನಿನ ಕ್ರಮ ಕೈಗೊಳ್ಳಲಾಗುವುದು. ಚಾಲನಾ ಪರವಾನಗಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲು ಶಿಫಾರಸ್ಸು ಮಾಡಲಾಗಿದೆ. ಸಿಆರ್‍ಪಿಸಿ ಅಡಿ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಹ ಟ್ವೀಟ್ ಮಾಡಿದ್ದು, ಚಾಲ್ತಿಯಲ್ಲಿರುವ ಕೊರೊನಾ ರೋಗದ ನಡುವೆ ರೊಪಾಂತರಗೊಂಡಿರುವ ಹೊಸ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುಂಬರುವ ಹೊಸ ವರ್ಷದ ಸಂಭ್ರಮಾಚರಣೆಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 31 ಸಂಜೆ 6 ರಿಂದ ಜನವರಿ 1 ಬೆಳಗ್ಗೆ 6 ರವರೆಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಾದ ಮುಖ್ಯ ರಸ್ತೆ, ಪಾರ್ಕ್, ಪ್ಲೇಗ್ರೌಂಡ್‍ಗಳಲ್ಲಿ ಯಾವುದೇ ರೀತಿಯ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.

ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಚರ್ಚ್‍ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರಗಳನ್ನು ಸಂಚಾರ ನಿಷೇಧಿತ ವಲಯವೆಂದು ಪರಿಗಣಿಸಲಾಗಿದೆ. ಅದೇ ರೀತಿ ಅನವಶ್ಯಕ ಸಂಚಾರ, ಬೈಕ್ ಸುತ್ತಾಟ, ವ್ಹೀಲಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ನಗರದ ಎಲ್ಲಾ ಫ್ಲೈಓವರ್‍ಗಳನ್ನು ಮುಚ್ಚಲಾಗಿರುತ್ತದೆ ಮತ್ತು ಕೆಲವೆಡೆ ಸಂಚಾರ ನಿಯಂತ್ರಣ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ಮನೆಗಳಲ್ಲಿ, ಪ್ರೈವೇಟ್ ಕ್ಲಬ್, ರೆಸಿಡೆನ್ಯಿಯಲ್ ಕಾಂಪ್ಲೆಕ್ಸ್‍ಗಳಲ್ಲಿ ಸದಸ್ಯರು ಮಾತ್ರ ಆಚರಿಸಲು ಅವಕಾಶವಿದೆ. ಮುಂಚಿತವಾಗಿ ಬುಕ್ಕಿಂಗ್ ಮಾಡಿರುವ ಸದಸ್ಯರಿಗೆ ಮಾತ್ರ ಕ್ಲಬ್, ರೆಸ್ಟಾರೆಂಟ್‍ಗಳಿಗೆ ಪ್ರವೇಶವಿರುತ್ತದೆ ಎಂದಿದ್ದಾರೆ. ಈ ಆದೇಶಗಳನ್ನು ಉಲ್ಲಂಘಿಸಿದರೆ ದಂಡದ ಜೊತೆಗೆ, ಐಪಿಸಿ ಸೆಕ್ಷನ್ 188 ಹಾಗೂ ಎನ್‍ಡಿಎಮ್‍ಎ ಕಾಯ್ದೆಯಡಿ ಪ್ರಕರಣ ದಾಖಲಿಸುದಾಗಿ ಎಚ್ಚರಿಕೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in