Connect with us

Latest

ಬಸವಣ್ಣನ ಅನುಭವ ಮಂಟಪ ನೆನೆದ ಪ್ರಧಾನಿ ಮೋದಿ- ಕನ್ನಡದಲ್ಲಿ ಭಾಷಣ

Published

on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನಕ್ಕೆ ಇಂದು ಶಂಕು ಸ್ಥಾಪನೆ ನೆರವೇರಿಸಿದರು. ಈ ವೇಳೆ ನೂತನ ಸಂಸತ್ ಭವನದ ಮಾದರಿಯನ್ನು ಸಹ ಬಿಡುಗಡೆಗೊಳಿಸಿದರು. ಕೇಂದ್ರ ಸಚಿವರು, ಧಾರ್ಮಿಕ ಪ್ರಮುಖರು ಸೇರಿದಂತೆ ವಿವಿಧ ಗಣ್ಯರು ಭಾಗಿಯಾಗಿದ್ದರು. ಇದೇ ವೇಳೆ ಬಸವಣ್ಣನವರ ಅನುಭವ ಮಂಟಪ ನೆನೆದು ಕನ್ನಡದಲ್ಲಿ ಮಾತನಾಡಿದರು.

ನವದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ಸಂಸತ್ ಭವನದ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ 200 ಗಣ್ಯರು ಭಾಗವಹಿಸಿದ್ದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ, ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪೂರಿ ಹಾಗೂ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಈ ಅನುಭವ ಮಂಟಪ ಜನಸಭೆ ನಾಡಿನ ಒಟ್ಟು ರಾಷ್ಟ್ರದ ಉನ್ನತಿ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಈ ಅನುಭವ ಮಂಟಪ ರಾಜ್ಯ, ರಾಷ್ಟ್ರದ ಉನ್ನತಿಗಾಗಿ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಅನುಭವ ಮಂಟಪ ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುತ್ತದೆ ಎಂದು ಕನ್ನಡದಲ್ಲೇ ಮಾತನಾಡಿದರು.

ಇಂದು ಐತಿಹಾಸಿಕ ದಿನವಾಗಿದ್ದು, ಹೊಸ ಸಂಸತ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಹೊಸ ಸಂಸತ್ ಭವನವನ್ನು ಭಾರತೀಯರೆಲ್ಲರೂ ಸೇರಿ ನಿರ್ಮಿಸೋಣ. ಇದು 130 ಕೋಟಿ ಭಾರತೀಯರು ಹೆಮ್ಮೆಪಡುವ ದಿನವಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಹೊಸ ಸಂಸತ್ ಭವನವು ಹೊಸ ಮತ್ತು ಹಳೆಯ ಸಹಬಾಳ್ವೆಯ ಉದಾಹರಣೆಯಾಗಿದೆ. ಸಮಯ ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ ನಮ್ಮೊಳಗೇ ಬದಲಾವಣೆ ಮಾಡಿಕೊಳ್ಳುವ ಪ್ರಯತ್ನವಿದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಪ್ರಸ್ತುತ ಇರುವ ಸಂಸತ್ ಭವನವು 100 ವರ್ಷ ಹಳೆಯದಾಗಿದ್ದು, ಹಲವು ಬಾರಿ ಉನ್ನತೀಕರಿಸಲಾಗಿದೆ. ಈಗ ಅದಕ್ಕೆ ವಿಶ್ರಾಂತಿ ಅವಶ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತ 75ನೇ ಸ್ವಾತಂತ್ರೋತ್ಸವ ಆಚರಿಸುವ ಸುಸಂದರ್ಭದಲ್ಲಿ ಹೊಸ ಸಂಸತ್ ಭವನ ಹೊಂದುವುದಕ್ಕಿಂತ ಸುಂದರ, ಪವಿತ್ರ ದಿನ ಮತ್ಯಾವುದಿದೆ? ಹೊಸ ಸಂಸತ್ ಭವನವು ‘ಆತ್ಮನಿರ್ಭರ ಭಾರತ’ದ ಗುರಿಯನ್ನು ಸಾಧಿಸಲು ಹಾಗೂ 21ನೇ ಶತಮಾನದ ಮಹತ್ವಾಕಾಂಕ್ಷೆಯನ್ನು ಪೂರೈಸಲು ಸಹಾಯವಾಗಲಿದೆ. ಸ್ವಾತಂತ್ರ್ಯದ ಬಳಿಕ ಹಳೆಯ ಸಂಸತ್ ಕಟ್ಟಡ ಹೊಸ ದಿಕ್ಕು ನೀಡಿತು. ಆದರೆ ಹೊಸ ಕಟ್ಟಡ ಆತ್ಮನಿರ್ಭರ ಭಾರತಕ್ಕೆ ಸಾಕ್ಷಿಯಾಗಲಿದೆ ಎಂದರು.

2014ರಲ್ಲಿ ಮೊದಲ ಭಾರಿಗೆ ಪ್ರಧಾನ ಮಂತ್ರಿಯಾಗಿ ಕಾಲಿಟ್ಟ ಸಂದರ್ಭವನ್ನು ಜೀವನದಲ್ಲಿ ನಾನೆಂದೂ ಮರೆಯುವುದಿಲ್ಲ. ಪ್ರಜಾಪ್ರಭುತ್ವದ ಈ ದೇವಸ್ಥಾನಕ್ಕೆ ಕಾಲಿಡುವ ಮುನ್ನ ಹಣೆ ಹಚ್ಚಿ ನಮಸ್ಕರಿಸಿ ಬಂದಿದ್ದೇನೆ. ಎಲ್ಲ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರಿಗೆ ಉತ್ತರದಾಯಿಗಳು ಎಂಬುದುನ್ನು ಮರೆಯಬಾರದು ಎಂದು ತಿಳಿಸಿದರು.

ಮಾಜಿ ಪ್ರಧಾನಿಗಳು, ಮಾಜಿ ಲೋಕಸಭಾ ಸ್ಪೀಕರ್‍ಗಳು, ಸರ್ವಪಕ್ಷಗಳ ನಾಯಕರು ಭಾಗಿಯಾಗಿದ್ದರು. ಇನ್ನೂ ವಿಶೇಷ ಎಂಬಂತೆ 12 ಧಾರ್ಮಿಕ ಪ್ರಮುಖರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಹರಿವಂಶ್ ನಾರಾಯಣ್ ಸಿಂಗ್ ಅವರಿಗೆ ಸಂದೇಶ ಬೋಧಿಸಿದರು.

ಹೊಸ ಕಟ್ಟಡವು ‘ಆತ್ಮನಿರ್ಭರ ಭಾರತ’ದ ದೂರ ದೃಷ್ಟಿಯ ಒಂದು ಭಾಗವಾಗಿದೆ. ಅಲ್ಲದೆ ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಜನರ ಸಂಸತ್‍ನ್ನು ನಿರ್ಮಿಸುವ ಒಂದು ಹೆಗ್ಗುರುತಾಗಿದೆ. ಹೊಸ ಭಾರತದ ಅಗತ್ಯತೆಗಳು ಹಾಗೂ ಆಕಾಂಕ್ಷೆಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿ ಸಂಸತ್ ಭವನ ನಿರ್ಮಿಸಲಾಗುತ್ತಿದೆ. 75ನೇ ಸ್ವಾತಂತ್ರ್ಯೋತ್ಸವ ಅಂದರೆ 2022ಕ್ಕೆ ಲೋಕಾರ್ಪಣೆಯಾಗಲಿದೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.

ಸ್ಪೀಕರ್ ಓಂ ಬಿರ್ಲಾ ಟವರು ಈ ಕುರಿತು ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರೈಸುತ್ತದೆ. ಅಂದೇ ಸರ್ಕಾರದ ಎರಡೂ ಮನೆಯ ಕಲಾಪಗಳು ಹೊಸ ಸಂಸತ್ ಭವನದಲ್ಲಿ ನಡೆಯಲಿವೆ. ಆಗಸ್ಟ್ 15, 2021ರಂದು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದರು.

Click to comment

Leave a Reply

Your email address will not be published. Required fields are marked *

www.publictv.in