Monday, 16th December 2019

Recent News

1ನೇ ವರ್ಷದ ಪುಣ್ಯತಿಥಿ- ಅಜಾತಶತ್ರುವನ್ನು ಸ್ಮರಿಸಿದ ಮೋದಿ, ಅಮಿತ್ ಶಾ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾಗಿ ಇಂದಿಗೆ ಒಂದು ವರ್ಷವಾಗಿದೆ. ಈ ವೇಳೆ ಮರೆಯಲಾಗದ ಅಜಾತಶತ್ರುವನ್ನು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸ್ಮರಿಸಿದ್ದಾರೆ.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಯಪೇಯಿ ಅವರು ಆಗಸ್ಟ್ 16 2018ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಬಿಜೆಪಿ ಹಿರಿಯ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾಗಿ ಇಂದಿಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಇಂದು ಅವರ ಪುಣ್ಯತಿಥಿ ಆಚರಣೆ ಮಾಡಲಾಗುತ್ತಿದೆ.

ಈ ಪುಣ್ಯತಿಥಿಗೆ ವಾಜಪೇಯಿ ಅವರ ಸ್ಮಾರಕ ‘ಸದೈವ್ ಅಟಲ್’ಗೆ ಪ್ರಧಾನಿ ಮೋದಿ, ಅಮಿತ್ ಶಾ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಕೇಂದ್ರ ಸಚಿವರೆಲ್ಲರು ಭೇಟಿ ನೀಡಿ ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್ ಸಮೀಪದ ಶಿಂದೆ ಕಿ ಚವ್ವಾಣಿ ಹಳ್ಳಿಯಲ್ಲಿ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಕೃಷ್ಣ ಬಿಹಾರಿ ಮತ್ತು ಕೃಷ್ಣಾ ದೇವಿ ದಂಪತಿಗೆ 1924ರ ಡಿಸೆಂಬರ್ 25ರಂದು ವಾಜಪೇಯಿ ಜನಿಸಿದ್ದರು. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷಾ ಪ್ರೌಢಿಮೆ ಬೆಳೆಸಿದ್ದ ವಾಜಪೇಯಿ ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

1942 `ಭಾರತ ಬಿಟ್ಟು ತೊಲಗಿ ಚಳುವಳಿ’ಯಲ್ಲಿ ರಾಜಕಾರಣಕ್ಕೆ ಪ್ರವೇಶಿಸಿದ್ದ ವಾಜಪೇಯಿ ಅವರು 1991, 1996, 1998, 1999 ಹಾಗೂ 2004ರಲ್ಲಿ ಲಕ್ನೋ ಲೋಕಸಭಾ ಕ್ಷೇತ್ರದಿಂದ ಸತತವಾಗಿ 5 ಬಾರಿ ಆಯ್ಕೆ ಆಗಿದ್ದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ವಿದೇಶಾಂಗ ವ್ಯವಹಾರಗಳ ಸಚಿವ ಎನ್ನುವ ಹೆಗ್ಗಳಿಕೆಗೂ ಕೂಡ ವಾಜಪೇಯಿ ಪಾತ್ರರಾಗಿದ್ದರು.

ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ರಾಜಕಾರಣಿ ಮತ್ತು ಕವಿಯಾಗಿದ್ದರು. ಅವರು ಮೂರು ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮೊದಲು 1996 ರಲ್ಲಿ 13 ದಿನಗಳ ಅವಧಿಗೆ. ನಂತರ 1998 ರಿಂದ 1999 ರವರೆಗೆ 13 ತಿಂಗಳ ಅವಧಿಗೆ ಮತ್ತು ಅಂತಿಮವಾಗಿ 1999 ರಿಂದ 2004 ರವರೆಗೆ ಪೂರ್ಣಾವಧಿಯಲ್ಲಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *