Connect with us

Cinema

ಅನುಷ್ಕಾ ಶರ್ಮಾಗೆ ಡಿವೋರ್ಸ್ ಕೊಡಿ- ಕೊಹ್ಲಿಗೆ ಬಿಜೆಪಿ ಶಾಸಕ ಸಲಹೆ

Published

on

ನವದೆಹಲಿ: ಅನುಷ್ಕಾ ಶರ್ಮಾಗೆ ಡಿವೋರ್ಸ್ ಕೊಡಿ ಎಂದು ಬಿಜೆಪಿ ಶಾಸಕರೊಬ್ಬರು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಸಲಹೆ ನೀಡಿದ್ದಾರೆ.

ಅನುಷ್ಕಾ ಶರ್ಮಾ ನಿರ್ಮಾಣ ಮಾಡಿರುವ ಮೊದಲ ವೆಬ್ ಸೀರಿಸ್ ‘ಪಾತಾಳ್ ಲೋಕ್’ನಲ್ಲಿ ಜಾತಿ ನಿಂದನೆ ಮತ್ತು ನೇಪಾಳಿ ಸಮುದಾಯವೊಂದನ್ನು ಅವಮಾನಿಸಲಾಗಿದೆ ಎಂದು ಹೇಳಲಾಗಿದೆ. ಈ ವಿಚಾರವಾಗಿ ಅನುಷ್ಕಾಗೆ ನೋಟಿಸ್ ಕೂಡ ನೀಡಲಾಗಿದೆ. ಈಗ ಬಿಜೆಪಿ ಎಂಎಲ್‍ಎ ನಂದಕಿಶೋರ್ ಗುರ್ಜರ್ ಅನುಷ್ಕಾ ಶರ್ಮಾ ಅವರ ವಿರುದ್ಧ ದೂರು ನೀಡಿದ್ದಾರೆ.

ಉತ್ತರ ಪ್ರದೇಶದ ಲೋನಿ ಕ್ಷೇತ್ರದ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್, ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ನನ್ನ ಅನುಮತಿ ಇಲ್ಲದೇ ನನ್ನ ಫೋಟೋವನ್ನು ವೆಬ್ ಸೀರಿಸ್‍ನಲ್ಲಿ ಬಳಸಲಾಗಿದೆ. ಈ ಮೂಲಕ ಅವರು ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ನನ್ನ ತೇಜೋವಧೆ ಮಾಡಿದ್ದಾರೆ. ಹಾಗಾಗಿ ಅನುಷ್ಕಾ ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಅನುಷ್ಕಾ ನಿರ್ಮಾಣ ಮಾಡಿರುವ ವೆಬ್ ಸೀರಿಸ್ ಪಾತಾಳ್ ಲೋಕ್‍ನಲ್ಲಿ ನಂದಕಿಶೋರ್ ಗುರ್ಜರ್ ಅವರ ಒಂದು ಫೋಟೋವನ್ನು ಬಳಸಲಾಗಿದೆ. ಯಾವುದೋ ಕಾರ್ಯಕ್ರಮದಲ್ಲಿ ನಂದಕಿಶೋರ್ ಭಾಗವಹಿಸಿದ್ದ ನ್ಯೂಸ್‍ಪೇಪರ್ ಕಟಿಂಗ್‍ವೊಂದನ್ನು ತೋರಿಸಲಾಗಿದೆ. ಇದರಿಂದ ಕೋಪಗೊಂಡಿರುವ ನಂದಕಿಶೋರ್, ಈ ವೆಬ್ ಸರಣಿಯನ್ನು ಬ್ಯಾನ್ ಮಾಡಬೇಕು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಪತ್ರ ಕೂಡ ಬರೆದಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಂದಕಿಶೋರ್, ಅನುಷ್ಕಾ ಶರ್ಮಾ ಅವರು ಈ ರೀತಿ ಮಾಡಿರುವುದು ಸರಿಯಲ್ಲ. ಅವರೇ ಈ ವೆಬ್ ಸೀರಿಸ್ ಅನ್ನು ಬ್ಯಾನ್ ಮಾಡಬೇಕು. ಜೊತೆಗೆ ಅವರ ಪತಿ ವಿರಾಟ್ ಕೊಹ್ಲಿ ದೇಶಕ್ಕಾಗಿ ಆಡುವ ರಾಷ್ಟ್ರೀಯವಾದಿ, ಅವರು ಅನುಷ್ಕಾ ಶರ್ಮಾಗೆ ವಿಚ್ಛೇದನ ನೀಡಬೇಕು ಎಂದು ಸಲಹೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದೆ ಅನುಷ್ಕಾ ಶರ್ಮಾ ನಿರ್ಮಾ ಮಾಡಿರುವ ವೆಬ್ ಸೀರಿಸ್‍ನಲ್ಲಿ ಜಾತಿ ನಿಂದನೆ ಮಾಡಲಾಗಿದೆ. ವೆಬ್ ಸರಣಿಯ ಎರಡನೇ ಭಾಗದಲ್ಲಿ ನೇಪಾಳಿ ಸಮುದಾಯವನ್ನು ನಿಂದಿಸುವ ಡೈಲಾಗ್ ಇದೆ. ಎರಡನೇ ಸಂಚಿಕೆಯ ದೃಶ್ಯವೊಂದರಲ್ಲಿ ಮಹಿಳಾ ಪೊಲೀಸ್ ನೇಪಾಳಿ ವ್ಯಕ್ತಿಯ ಪಾತ್ರದ ವಿಚಾರಣೆ ವೇಳೆ ಜಾತಿಯನ್ನು ಗುರುತಿಸೋ ಪದ ಬಳಕೆ ಮಾಡಲಾಗುತ್ತದೆ. ನೇಪಾಳಿ ಪದಗಳ ಜೊತೆ ಮುಂದೆ ಬಳಸುವ ಡೈಲಾಗ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅನುಷ್ಕಾ ಶರ್ಮಾರ ನಿರ್ಮಾಣದಲ್ಲಿ ವೆಬ್ ಸೀರೀಸ್ ಮೂಡಿ ಬಂದಿರೋದರಿಂದ ಅವರಿಗೆ ಲೀಗಲ್ ನೋಟಿಸ್ ನೀಡಲಾಗಿದೆ ಎಂದು ಗಿಲ್ಡ್ ಸದಸ್ಯ ಮತ್ತು ಪ್ರಣಾಯ್ ರಾಯ್ ಅಸೋಸಿಯೇಟ್ಸ್ ಚೇಂಬರ್ ವಕೀಲ ವೀರೆನ್ ಶ್ರೀ ಗುರೂಂಗಾ ಹೇಳಿದ್ದರು.